ಆಂಬ್ಯುಲೆನ್ಸ್ ನೌಕರರ ಮುಷ್ಕರದಿಂದ ರೋಗಿಗಳಿಗೆ ಸಮಸ್ಯೆಯಾದರೆ ಕಠಿಣ ಕ್ರಮ: ಸಚಿವ ಖಾದರ್ ಎಚ್ಚರಿಕೆ

ಮಂಗಳೂರು: 108 ಆಂಬುಲೆನ್ಸ್ ನೌಕರರು ಮುಷ್ಕರ ಮಾಡಿ ರೋಗಿಗಳಿಗೆ ಸಮಸ್ಯೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ನಾನು ಸ್ಪಷ್ಟಪಡಿಸಿದ್ದೇನೆ. 108 ಆಂಬುಲೆನ್ಸ್‌ಗಳ ಸಿಬ್ಬಂದಿ ನಮ್ಮ ಸಹೋದರರು. ಆದರೆ ಅವರಿಗಿಂತ ಮೊದಲು ರೋಗಿಗಳ ಯೋಗಕ್ಷೇಮ ನಮಗೆ ಮುಖ್ಯ. ಮುಷ್ಕರ ಮಾಡಿ ರೋಗಿಗಳಿಗೆ ಸಮಸ್ಯೆ ಆದರೆ ಸುಮ್ಮನಿರಲಾಗದು ಎಂದು ಹೇಳಿದರು.

108 ಆಂಬುಲೆನ್ಸ್‌ಗಳನ್ನು ನಿಭಾಯಿಸುವವರು ನಾವಲ್ಲ. ನೌಕರರ ನೇಮಕ, ಅವರ ಸಮವಸ್ತ್ರ, ಸ್ವಚ್ಛತೆ, ತರಬೇತಿ ನೀಡುವ ಜವಾಬ್ಧಾರಿ ಕಂಪೆನಿಗಳದ್ದು. ಚಾಲಕರಿಗೆ ಏನಾದರೂ ಸಮಸ್ಯೆ ಇದ್ದರೆ ಕಂಪೆನಿ ಜತೆ ಅವರು ಮಾತುಕತೆ ನಡೆಸಬೇಕು. ಅವರು ನೇಮಕಾತಿ ಸಂದರ್ಭ ಸಹಿ ಹಾಕುವಾಗ ತಿಳಿಸಲಾದ ನಿಗದಿತ ವೇತನ ನೀಡದಿದ್ದರೆ ಸರ್ಕಾರದ ಗಮನಕ್ಕೆ ತರಬೇಕು ಎಂದರು.

ಆಂಬುಲೆನ್ಸ್ ನೌಕರರು ಪ್ರತಿಭಟನೆ ಮಾಡಿ ರೋಗಿಗಳಿಗೆ ತೊಂದರೆ ಆದಲ್ಲಿ, ಆ ಸಮಯದಲ್ಲಿ ಯಾರು ಆಂಬುಲೆನ್ಸ್‌ನ ಜವಾಬ್ದಾರಿ ಹೊಂದಿರುತ್ತಾರೋ ಅವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಸಚಿವ ಖಾದರ್ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here