


ಮಂಗಳೂರು: ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆ ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಮನವಿ ಮಾಡಿದೆ.





ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ಭಾರ ಲೋಹ ಮಿಶ್ರಿತ ವಿಷಕಾರಿ ರಾಸಾಯನಿಕ ಗುಣವುಳ್ಳ ವಸ್ತುಗಳನ್ನು ಬಳಸಿ ತಯಾರಿಸಿರುವ ಗೌರಿ- ಗಣೇಶ ಮೂರ್ತಿಗಳ ಉತ್ಪಾದನೆ, ಸಂಗ್ರಹ ಹಾಗೂ ವಿಸರ್ಜನೆಯನ್ನು ಯಾವುದೇ ನೀರಿನ ಮೂಲದಲ್ಲಿ ವಿಸರ್ಜಿಸುವುದನ್ನು ರಾಜ್ಯಾದಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ.


ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಸಂಗ್ರಹಣೆ, ಮಾರಾಟ, ವಿತರಣೆ ಹಾಗೂ ಸಾರ್ವಜನಿಕ ಪ್ರದರ್ಶನವನ್ನು ಅನುಮತಿಸಲಾಗುವುದಿಲ್ಲ. ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ನೈಸರ್ಗಿಕ ಮಣ್ಣು ಹಾಗೂ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲಾದ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕು. ನೈಸರ್ಗಿಕ ಹಾಗೂ ವಿಷರಹಿತ ಬಣ್ಣಗಳಿಂದ ಅಲಂಕರಿಸಲಾದ ಮೂರ್ತಿಗಳಿಗೆ ಮಾತ್ರ ಆದ್ಯತೆ ನೀಡಬೇಕು. ಯಾವುದೇ ಗಣೇಶನ ಮೂರ್ತಿಗಳನ್ನು ಕೆರೆ, ನದಿ, ಕಾಲುವೆ, ಜಲಾಶಯ ಅಥವಾ ಇತರ ಜಲಮೂಲಗಳಲ್ಲಿ ವಿಸರ್ಜಿಸಬಾರದು.
ವಿಷಪೂರಿತ, ರಾಸಾಯನಿಕವುಳ್ಳ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು, ಉಪಯೋಗಿಸುವುದು ಕಂಡುಬಂದರೆ ಅಂತಹ ಮೂರ್ತಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಶಪಡಿಸಿಕೊಳ್ಳಲಾಗುತ್ತದೆ ಹಾಗೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.








