


ಮಂಗಳೂರು: ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಎಲ್ಲ ಆರೂ ಚರಣಗಳನ್ನು ಹಾಡುತ್ತೇವೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಈ ಹಾಡಿನ ಎರಡು ಚರಣಗಳನ್ನು ಹಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಆರೂ ಚರಣಗಳನ್ನು ಹಾಡಬೇಕೆಂದು ತೀರ್ಮಾನ ಕೈಗೊಂಡರೆ ಅದನ್ನು ಹಾಡಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.





ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣಗಳನ್ನು ಹಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಂದೇ ಮಾತರಂ ಗೌರವಪೂರ್ವಕ ಹಾಗೂ ಪವಿತ್ರವಾದ ಗೀತೆ. ರಾಜ್ಯ ಸರ್ಕಾರವಾಗಲಿ ಅಥವಾ ನಾವಾಗಲೀ ಈ ಗೀತೆಗೆ ಯಾವುದೇ ಅವಮಾನ ಮಾಡಿಲ್ಲ ಮತ್ತು ಸರ್ಕಾರಗಳ ತೀರ್ಮಾನಗಳಿಗೆ ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಆರು ಚರಣಗಳ ಪೂರ್ಣ ಗೀತೆಯನ್ನು ಹಾಡುವ ಮಾರ್ಗಸೂಚಿ ಇದೆ. ಇತ್ತೀಚೆಗೆ ಶಾಸಕರಾಗಿ, ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಪೂರ್ಣ ಗೀತೆಯನ್ನೇ ಹಾಡಲಾಗಿದೆ. ರಾಜ್ಯ ಸರ್ಕಾರ ಆರೂ ಚರಣಗಳನ್ನು ಹಾಡಬೇಕೆಂದು ತೀರ್ಮಾನ ಕೈಗೊಂಡರೆ ಅದನ್ನು ಹಾಡಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದರು.


ಬಿಜೆಪಿಗೆ ಚುನಾವಣೆ ಬಂದಾಗ ವಂದೇ ಮಾತರಂ ನೆನಪಾದದ್ದೇಕೆ?:
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ವ್ಯವಸ್ಥೆಯ ಪ್ರಕಾರ, ದಶಕಗಳಿಂದ 2 ಚರಣಗಳನ್ನು ಹಾಡುವ ಪದ್ಧತಿ ಜಾರಿಯಲ್ಲಿದೆ. ಎಲ್ಲರೂ ಅದನ್ನೇ ಹಾಡುತ್ತಾ ಬೆಳೆದಿದ್ದಾರೆ. ಆದರೆ 1977ರಲ್ಲಿ ಬಿಜೆಪಿ/ ಜನಸಂಘ ಬೆಂಬಲಿತ ಸರ್ಕಾರ ಅಧಿಕಾರದಲ್ಲಿದ್ದಾಗ ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಕಡ್ಡಾಯಗೊಳಿಸುವ ಕಾನೂನು ಏಕೆ ತರಲಿಲ್ಲ? ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ಬಾರಿ ಪ್ರಧಾನಿಯಾಗಿದ್ದಾಗ, 2014ರಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಇಷ್ಟೂ ವರ್ಷ ನೆನಪಾಗದ 6 ಚರಣಗಳ ವಿಷಯ, ಬಂಗಾಳ ಚುನಾವಣೆ ಹತ್ತಿರ ಬಂದಾಗಷ್ಟೇ ಬಿಜೆಪಿಗೆ ನೆನಪಾಗಿದ್ದು ಏಕೆ? ನಿಜವಾದ ದೇಶಭಕ್ತಿ ಅಥವಾ ವಂದೇ ಮಾತರಂ ಗೀತೆಯ ಮೇಲೆ ನೈಜ ಆಸಕ್ತಿ ಇದ್ದಿದ್ದರೆ ಬಿಜೆಪಿ ಆಡಳಿತಕ್ಕೆ ಬಂದ ತಕ್ಷಣವೇ ಇದನ್ನು ಜಾರಿಗೆ ತರುತ್ತಿತ್ತು. ಬಂಗಾಳ ಚುನಾವಣೆಯ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಮತ್ತು ಚಳವಳಿ ಸೃಷ್ಟಿಸುವುದಕ್ಕಾಗಿ ಹೆಣೆದಿರುವ ಹಿಡನ್ ಅಜೆಂಡಾ ಎಂದು ಯು.ಟಿ. ಖಾದರ್ ಆರೋಪಿಸಿದರು.







