


ಮಂಗಳೂರು: ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿಷಯಗಳ ಜತೆಗೆ ಕರಾವಳಿ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕರಾವಳಿಯ ಮಾನವ ಸಂಪನ್ಮೂಲ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.





ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಕರಾವಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕೆನರಾ ಚೇಂಬರ್ ಆಫ್ ಕಾಮರ್ಸ್, ಕ್ರೆಡಾಯ್, ಸಣ್ಣ ಕೈಗಾರಿಕೆಗಳ ಒಕ್ಕೂಟದ ಪ್ರಮುಖರ ಜತೆ ಸಭೆ ನಡೆಸಿ ಕರಾವಳಿಯ ಅಭಿವೃದ್ಧಿ ಕುರಿತು ಅನೇಕ ಪ್ರಸ್ತಾಪಗಳನ್ನು ಮಾಡಿದ್ದೇವೆ. ಇವುಗಳನ್ನು ಹಣಕಾಸು ಮತ್ತು ಕಾನೂನು ಇಲಾಖೆಗಳಲ್ಲಿ ಪರಿಶೀಲಿಸಿ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದರು.


ಕರಾವಳಿಯಲ್ಲಿ ಜಲಕ್ರೀಡೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸೂಕ್ತ ರೋಡ್‌ಮ್ಯಾಪ್ ಸಿದ್ಧಪಡಿಸಲಾಗುತ್ತಿದೆ. ಈ ಹಿಂದೆ ನೀಡಿದ ಪ್ರೋತ್ಸಾಹದಂತೆ ಮುಂದೆಯೂ ಜಲಕ್ರೀಡೆ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು. ನಿಯಮಾವಳಿ ಪ್ರಕಾರ ಮಳೆಗಾಲದ ಬಳಿಕ ಸೆಪ್ಟೆಂಬರ್ 15ರಿಂದ ಜಲಕ್ರೀಡೆಗಳು ಆರಂಭವಾಗಬೇಕಿತ್ತು. ಈ ಬಾರಿಯ ವಿಳಂಬಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಿ, ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ಪ್ರೋತ್ಸಾಹವನ್ನು ಕರಾವಳಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ತುಳು ಭಾಷೆಗೆ 2ನೇ ಅಧಿಕೃತ ಭಾಷಾ ಮಾನ್ಯತೆ:
ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ ನೀಡಬೇಕೆಂಬುದು ಕರಾವಳಿ ಜನರ ಬಹುಸಮಯದ ಬೇಡಿಕೆಯಾಗಿದೆ. ನಮ್ಮ ಸರ್ಕಾರ ಬಂದ ನಂತರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಅದು ಈಡೇರಲಿದೆ ಎಂಬ ಭರವಸೆ ಇದೆ ಎಂದು ಯು.ಟಿ. ಖಾದರ್ ಹೇಳಿದರು.
ಮಿಶ್ರಿತ ಹಾಗೂ ಕಲಬೆರಕೆ ಅಡಿಕೆ ತಡೆ:
ಕೊಲ್ಕತ್ತಾ/ ಬಂಗಾಳ ಮತ್ತು ನೆರೆ ದೇಶಗಳಿಂದ ಬರುತ್ತಿರುವ ಕಳಪೆ ಹಾಗೂ ನಕಲಿ ಅಡಕೆಯನ್ನು ಸ್ಥಳೀಯ ಅಡಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಯಾವುದೇ ರೀತಿಯ ಕಲಬೆರಕೆ ಅಡಕೆ ಮಾರುಕಟ್ಟೆಗೆ ಬರದಂತೆ ತಡೆಯಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯ ಬಗ್ಗೆ ಪರ- ವಿರೋಧ ಅಭಿಪ್ರಾಯಗಳಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.







