19ರಂದು ರಾಷ್ಟ್ರೀಯ ಲೋಕ್ ಅದಾಲತ್ – ಪುತ್ತೂರು, ಬೆಳ್ತಂಗಡಿ, ಸುಳ್ಯ, ಮಂಗಳೂರು, ಬಂಟ್ವಾಳ ನ್ಯಾಯಾಲಯ ಆವರಣದಲ್ಲಿ ಅದಾಲತ್ – ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಸವರಾಜ್ ಮಾಹಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗದ (ಪೂರ್ವ ವ್ಯಾಜ್ಯ) ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಸೆ.19ರಂದು ‘ರಾಷ್ಟ್ರೀಯ ಲೋಕ್ ಅದಾಲತ್’ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೆ.19ರಂದು ಮಧ್ಯಾಹ್ನ 2ರಿಂದ ಸಂಜೆ 5:30ರವರೆಗೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ನ್ಯಾಯಾಲಯ ಆವರಣದಲ್ಲಿ ಲೋಕ್ ಅದಾಲತ್ ನಡೆಯಲಿದೆ. ಸಾಲು ಸಾಲು ರಜೆಗಳಿರುವುದರಿಂದ ಸಾರ್ವಜನಿಕರಿಗೆ ಮತ್ತು ಕಕ್ಷಿದಾರರಿಗೆ ಅನನುಕೂಲವಾಗದಂತೆ ಈ ಬಾರಿ ಮಧ್ಯಾಹ್ನದ ನಂತರ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.

3264 ಪ್ರಕರಣಗಳು:

ಜಿಲ್ಲೆಯ ನ್ಯಾಯಾಲಯಗಳಲ್ಲಿ ಆ.1ಕ್ಕೆ ಅನ್ವಯಿಸಿ ಒಟ್ಟು 56,727 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಲ್ಲ 8,515 ಪ್ರಕರಣಗಳನ್ನು ಗುರುತಿಸಲಾಗಿದ್ದು, 3,264 ಪ್ರಕರಣಗಳನ್ನು ಲೋಕ್ ಅದಾಲತ್‌ಗೆ ವರ್ಗಾಯಿಸಲಾಗಿದೆ. ಪೂರ್ವಭಾವಿ ಸಂಧಾನದ ಮೂಲಕ ಈಗಾಗಲೇ 232 ಪ್ರಕರಣಗಳು ರಾಜಿಯಾಗಿ ವರದಿಗೆ ಸಿದ್ಧವಾಗಿವೆ ಹಾಗೂ 12 ಪ್ರಕರಣಗಳು ಸಂಪೂರ್ಣ ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರು ತಿಳಿಸಿದರು.

ಕಳೆದ ಜುಲೈ 11ರಂದು ನಡೆದ ಲೋಕ್ ಅದಾಲತ್‌ನಲ್ಲಿ 2,665 ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು.

ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಬಹುದಾದ ಪ್ರಕರಣಗಳು: ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಅಕ್ರಮ ಮರಳು ಸಾಗಾಟ ಪ್ರಕರಣಗಳು, ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳು, ವಿಚ್ಛೇದನ ಪ್ರಕರಣವನ್ನು ಹೊರತುಪಡಿಸಿ ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಗ್ರಾಹಕರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಭೂ ಸ್ವಾಧೀನ ಹಾಗೂ ಭೂ ಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಿಸಿದ ವ್ಯಾಜ್ಯಗಳು, ವೇತನ, ಭತ್ಯೆ ಹಾಗೂ ಪಿಂಚಣಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಜನನ/ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು, ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು.

ಲೋಕ್ ಅದಾಲತ್‌ನ ತೀರ್ಪಿಗೆ ಅಂತಿಮ ಮಾನ್ಯತೆ ಇದ್ದು, ಇದರ ವಿರುದ್ಧ ಯಾವುದೇ ಮೇಲ್ಮನವಿಗೆ ಅವಕಾಶವಿಲ್ಲ ಎಂದು ಹೇಳಿದರು.

ಸಾರ್ವಜನಿಕರು, ಕಕ್ಷಿದಾರರು ಹಾಗೂ ವಕೀಲರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಜಿಲ್ಲಾ ನ್ಯಾಯಾಧೀಶರು ಕರೆ ನೀಡಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಝೈಬುನ್ನಿಸಾ ಇದ್ದರು.

LEAVE A REPLY

Please enter your comment!
Please enter your name here