ಜಿಲ್ಲೆಯ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಿನ ಶ್ರಮ: ಹರೀಶ್ ಕುಮಾರ್ – ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ 9 ವರ್ಷ 3 ತಿಂಗಳು ಕಾರ್ಯ ನಿರ್ವಹಿಸಿ ನಿರ್ಗಮಿಸುತ್ತಿರುವ ಹರೀಶ್ ಕುಮಾರ್ – ನೂತನ ಜಿಲ್ಲಾಧ್ಯಕ್ಷ ಪದ್ಮರಾಜ್ ಪೂಜಾರಿ ಅವರಿಗೆ ಎಲ್ಲ ನಾಯಕರ ಸಹಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸುದೀರ್ಘ 9 ವರ್ಷ 3 ತಿಂಗಳ ಕಾಲ ಕಾರ್ಯನಿರ್ವಹಿಸಿ ನಿರ್ಗಮಿಸುತ್ತಿರುವ ಕೆ. ಹರೀಶ್ ಕುಮಾರ್ ಅವರು ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ, ಪದ್ಮರಾಜ್ ಅವರ ನೇತೃತ್ವಕ್ಕೆ ಜಿಲ್ಲೆಯ ಎಲ್ಲ ನಾಯಕರು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಲಾಗಿದ್ದು, ಅವರು ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ಮಾಡಲಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಸಂಪೂರ್ಣ ಯಶಸ್ಸು ಗಳಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

18ರ ಬಳಿಕ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ:

ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿನಲ್ಲಿ ಕರೆದಿರುವ ನೂತನ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಪದ್ಮರಾಜ್ ಅವರು ಭಾಗವಹಿಸಬೇಕಿರುವುದರಿಂದ ಮತ್ತು ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ 19 ಅಥವಾ 20ಕ್ಕೆ ಮುಂದೂಡಲಾಗಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.

ಸಂಪುಟ ಸಭೆಯಲ್ಲಿ ವಿಶೇಷ ಯೋಜನೆಗಳ ನಿರೀಕ್ಷೆ

ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷಾ ಮಾನ್ಯತೆ ನೀಡುವುದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ್ಯ’ ನಾಮಕರಣ, ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮ, ಐಟಿ ಪಾರ್ಕ್ ಹಾಗೂ ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ವಿಶೇಷ ಯೋಜನೆಗಳ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಸಿಎಂ ಜತೆ ಚರ್ಚಿಸಿದ್ದಾರೆ. ಕರಾವಳಿಗೆ ವಿಶೇಷ ಆದ್ಯತೆಯ ನೆಲೆಯಲ್ಲಿ ಯೋಜನೆಗಳು ಜಾರಿಯಾಗುವ ನಿರೀಕ್ಷೆಯಿದೆ ಎಂದು ಹರೀಶ್ ಕುಮಾರ್ ಹೇಳಿದರು.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಕೊಲೆ, ಕೋಮು ಸಂಘರ್ಷ ಹಾಗೂ ದ್ವೇಷ ಭಾಷಣಗಳು ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಶಾಂತಿಯುತ ವಾತಾವರಣ ನೆಲೆಸಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ, ನೈಟ್ ಲೈಫ್ ಜಾರಿಗೆ ಈಗಿನ ವಾತಾವರಣ ಪೂರಕವಾಗಿದೆ ಎಂದರು.

ಬಿಜೆಪಿಯ ಅನುದಾನದ ಟೀಕೆಗೆ ತಿರುಗೇಟು

ಚುನಾವಣೆಯ ಸಂದರ್ಭದಲ್ಲಿ “ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಹಿಂದುತ್ವದ ಬಗ್ಗೆ ಮಾತನಾಡಿ” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾತನ್ನು ನೆನಪಿಸಿದ ಹರೀಶ್ ಕುಮಾರ್, “ಈಗ ಬಿಜೆಪಿ ನಾಯಕರು ಯಾವ ಮುಖವಿಟ್ಟು ಚರಂಡಿ ಹಾಗೂ ಮೂಲಸೌಕರ್ಯ ಅನುದಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಜತೆಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ತುಳು ಭಾಷೆ ನಮ್ಮ ಅಸ್ಮಿತೆ:

ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ವಿಚಾರದ ಕುರಿತು ಮಾತನಾಡಿ, “ತುಳು ಕೇವಲ ಭಾವನಾತ್ಮಕ ವಿಚಾರವಲ್ಲ, ಅದು ತುಳುನಾಡಿನ ಅಸ್ಮಿತೆಯ ಸಂಕೇತ. ತುಳು ಭಾಷೆಗೆ ಸೂಕ್ತ ಮಾನ್ಯತೆ ಹಾಗೂ ಗೌರವ ಸಿಗಬೇಕು ಎಂಬುದು ಪ್ರತಿಯೊಬ್ಬ ತುಳುವರ ಆಶಯವಾಗಿದೆ” ಎಂದರು.

LEAVE A REPLY

Please enter your comment!
Please enter your name here