ಕಸ್ತೂರಿರಂಗನ್ ವರದಿ ಆತಂಕ ನೀಗಿಸಲು ಕಾರ್ಯಪಡೆ ರಚಿಸಿ: ಸಂಸದ ಕ್ಯಾ.ಚೌಟ ಒತ್ತಾಯ – ಮಂಗಳೂರು- ಬೆಂಗಳೂರು ರೈಲು ಹಳಿ ಡಬ್ಲಿಂಗ್ ಗೆ ಶೀಘ್ರ ಡಿಪಿಆರ್, ರಾಜ್ಯ ಸರ್ಕಾರದಿಂದ ನೋಡಲ್ ಅಧಿಕಾರಿ ನೇಮಿಸಲು ಆಗ್ರಹ

ಮಂಗಳೂರು: ಕಸ್ತೂರಿರಂಗನ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೇವಲ ಕ್ಯಾಬಿನೆಟ್‌ ನಿರ್ಣಯಕ್ಕೆ ಸೀಮಿತವಾಗದೆ, ಜನವಸತಿ ಪ್ರದೇಶಗಳನ್ನು ಸಂಪೂರ್ಣ ಹೊರಗಿಟ್ಟು ‘ಜೀರೋ ಬಫರ್ ಝೋನ್’ ಕಾಯ್ದಿರಿಸಲು ಕಾರ್ಯಪಡೆ ರಚಿಸಿ ಸ್ಪಷ್ಟ ಹೆಜ್ಜೆ ಇಡಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಬಗ್ಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಮಧ್ಯೆ ಸ್ಪಷ್ಟತೆಯ ಕೊರತೆಯಿದೆ. ಅಧಿಕಾರಿಗಳು ಅಂದಾಜಿನ ಮೇಲೆ ಮಾತನಾಡುತ್ತಿರುವುದರಿಂದ ಮಲೆನಾಡು ಭಾಗದ ರೈತರು ಭಯಭೀತರಾಗಿದ್ದಾರೆ. ಜಿಲ್ಲೆಯ 43 ಬಾಧಿತ ಗ್ರಾಮಗಳಲ್ಲಿ ತಹಸೀಲ್ದಾರ್, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮ ಸಭೆಗಳನ್ನು ನಡೆಸಬೇಕು. ಜನರಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕೊಂಕಣ್ ರೈಲ್ವೆ ವಿಲೀನಕ್ಕೆ ಒತ್ತಾಯ:

ಕೊಂಕಣ್ ರೈಲ್ವೆಯನ್ನು ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರವೂ ತನ್ನ ಪಾಲಿನ ಷೇರುಗಳನ್ನು ಬಿಟ್ಟುಕೊಟ್ಟು ನೇತೃತ್ವ ವಹಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಕ್ಯಾ.ಚೌಟ ಹೇಳಿದರು.

ರೈಲು ಹಳಿ ಡಬ್ಲಿಂಗ್ ಶೀಘ್ರ ಡಿಪಿಆರ್:

ಮಂಗಳೂರು– ಬೆಂಗಳೂರು ನಡುವೆ ಈಗಾಗಲೇ ಸಂಪೂರ್ಣ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಡಬಲ್ ಹಳಿ ನಿರ್ಮಾಣಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆ ಆರಂಭವಾಗಿದ್ದು, ಶೀಘ್ರ ಡಿಪಿಆರ್ ಸಿದ್ಧವಾಗಲಿದೆ. ಇದಕ್ಕೆ ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿ ಭೂಸ್ವಾಧೀನ ಸೇರಿದಂತೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಶೀಘ್ರ ವಂದೇ ಭಾರತ್ ರೈಲು:

ಮಂಗಳೂರು– ಬೆಂಗಳೂರು ನಡುವೆ ಶೀಘ್ರ ವಂದೇ ಭಾರತ್ ರೈಲು ಓಡಾಟ ಆರಂಭವಾಗುವ ವಿಶ್ವಾಸವಿದ್ದು, ಇದು ಜಂಕ್ಷನ್ ಬದಲು ಮಂಗಳೂರು ಸೆಂಟ್ರಲ್‌ನಿಂದಲೇ ಹೊರಡಬೇಕೆಂಬುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸಂಸದ ಚೌಟ ತಿಳಿಸಿದರು.

———-

ಬಾಕ್ಸ್

ಅಡಕೆ ಬೆಳೆಗಾರರಿಗೆ ಒನ್ ಟೈಮ್ ಪರಿಹಾರ ಪ್ಯಾಕೇಜ್: ಒತ್ತಾಯ

ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗ ಬಾಧಿತ ಅಡಕೆ ಬೆಳೆಗಾರರಿಗೆ ಒನ್ ಟೈಮ್ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ರಸ್ತೆಗಳ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ 300 ಕೋಟಿ ರು. ವಿಶೇಷ ಪ್ಯಾಕೇಜ್, ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ, ತುಳು ಭಾಷೆಗೆ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕು. ಮಂಗಳೂರು ಮೀನುಗಾರಿಕಾ ಕಾಲೇಜಿಗೆ ಪ್ರತ್ಯೇಕ ಸ್ಥಾನಮಾನ, ಕರಾವಳಿ ಪ್ರವಾಸೋದ್ಯಮ ಪ್ರಾಧಿಕಾರ ಮತ್ತು ಫೆರ್ರಿ ಸರ್ವಿಸ್, ಸಿಲಿಕಾನ್ ಬೀಚ್ ಉತ್ತೇಜನ ಇತ್ಯಾದಿಗಳ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಕ್ಯಾ.ಬ್ರಿಜೇಶ್ ಚೌಟ ಒತ್ತಾಯಿಸಿದರು.

LEAVE A REPLY

Please enter your comment!
Please enter your name here