


ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರ ನಡೆದ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಡಳಿತಾತ್ಮಕ ಹಾಗೂ ಸರ್ಕಾರಿ ಉದ್ದೇಶಗಳಿಗಾಗಿ ತುಳು ಭಾಷೆಯನ್ನು 2ನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಕರಡು ಅಧಿಸೂಚನೆ ಹೊರಡಿಸಲು ತೀರ್ಮಾನಿಸಿದೆ.





ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಸಭೆಯ ಮಹತ್ವದ ತೀರ್ಮಾನಗಳನ್ನು ತಿಳಿಸಿದರು.


ಹಿಂದಿನ ಸರ್ಕಾರ ತುಳು ಭಾಷೆಗೆ ಅಧಿಕೃತ ಸ್ಥಾನಮಾನವನ್ನು ಏಕೆ ನೀಡಿಲ್ಲ ಎಂದು ಪ್ರಶ್ನೆ ಮಾಡುವುದಿಲ್ಲ. ಆದರೆ ಈ ವಿಷಯದಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದರು.
ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗಾಗಿ ಅದನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದು ಗಣ್ಯರು, ಸಂಘಟನೆಗಳು ಮತ್ತು ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಈ ಪ್ರಸ್ತಾವನೆಯನ್ನು ಪರಿಗಣಿಸುವ ಮುನ್ನ ಸರ್ಕಾರವು ತಜ್ಞರು ಮತ್ತು ಅಧಿಕಾರಿಗಳಿಂದ ವರದಿ ಪಡೆದಿತ್ತು. ಡಾ.ಎಂ. ಮೋಹನ್ ಆಳ್ವ ನೇತೃತ್ವದ ಸಮಿತಿಯು 2023ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಶಿಫಾರಸುಗಳ ಆಧಾರದ ಮೇಲೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಡಳಿತಾತ್ಮಕ ಮತ್ತು ಸರ್ಕಾರಿ ಅಧಿಕೃತ ಉದ್ದೇಶಗಳಿಗಾಗಿ ಕನ್ನಡದ ಜೊತೆಗೆ ತುಳು ಭಾಷೆಯನ್ನು ಬಳಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಜಾರಿಗೆ ತರುವಲ್ಲಿ ಜಿಲ್ಲಾಡಳಿತಗಳು ನೋಡಲ್ ಏಜೆನ್ಸಿಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.
ತುಳು ಭಾಷೆಯ ಬಳಕೆ ಮತ್ತು ಪ್ರಚಾರಕ್ಕೆ ಸಂಬಂಧಿಸಿದ ಅನುವಾದ, ತರಬೇತಿ ಹಾಗೂ ಇತರ ಚಟುವಟಿಕೆಗಳಿಗಾಗಿ ಸರ್ಕಾರವು ವಾರ್ಷಿಕ 82 ಲಕ್ಷ ರು.ಗಳನ್ನು ಮೀಸಲಿಡಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಮಂಗಳೂರು ಜಿಲ್ಲೆಯ ಮರುನಾಮಕರಣ:
ಮಂಗಳೂರು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವಂತೆ ವಿವಿಧ ವಲಯಗಳಿಂದ ಬೇಡಿಕೆ ಇದೆ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಕರಡು ಅಧಿಸೂಚನೆಯನ್ನು ಒಂದು ತಿಂಗಳ ಅವಧಿಗೆ ಪ್ರಕಟಿಸಲಾಗುವುದು. ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಡಿಸಿಎಂ ಡಾ.ಜಿ. ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಇದ್ದರು.








