ಕರಾವಳಿಯಲ್ಲಿ ‘ರಾಜ್ಯ ಸಚಿವ ಸಂಪುಟ’ಕ್ಕೆ ಅಭೂತಪೂರ್ವ ಸ್ವಾಗತ: ಬೃಹತ್ ಜನಸಾಗರದ ನಡುವೆ ಡಬಲ್ ಡೆಕ್ಕರ್‌ನಲ್ಲಿ ಸಿಎಂ ಡಿಕೆಶಿ ರೋಡ್ ಶೋ – ಉರಿಬಿಸಿಲಿನಲ್ಲಿ ಜನರತ್ತ ಕೈ ಬೀಸುತ್ತಾ ಸಾಗಿದ ನಾಯಕರು – ಕಲಾ ಪ್ರಕಾರಗಳ ರಂಗು, ಮೆರವಣಿಗೆಯುದ್ದಕ್ಕೂ ಹಬ್ಬದ ವಾತಾವರಣ

ಮಂಗಳೂರು: ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟಕ್ಕೆ ತುಳುನಾಡಿನ ವೈಭವೋಪೇತ ಹಾಗೂ ಸಾಂಪ್ರದಾಯಿಕ ಸ್ವಾಗತ ದೊರೆತಿದೆ. ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ದರ್ಶನದ ಬಳಿಕ, ಸಿಎಂ ಡಿಕೆಶಿ ಹಾಗೂ ಸಚಿವರ ತಂಡ ವಿಶೇಷ ‘ಐರಾವತ’ ವೋಲ್ವೋ ಬಸ್‌ನಲ್ಲಿ ನಗರದ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿತು. ಅಲ್ಲಿಂದ ಪ್ರಜಾಸೌಧದವರೆಗೆ ಡಬಲ್ ಡೆಕ್ಕರ್ ಓಪನ್ ರೂಫ್ ಬಸ್ ಮೆರವಣಿಗೆ.

ಉರಿಬಿಸಿಲನ್ನು ಲೆಕ್ಕಿಸದೆ, ತೆರೆದ ಬಸ್ಸಿನ ಮೇಲ್ಭಾಗದಲ್ಲಿ ನಿಂತು ನಾಯಕರು ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರಿಗೆ ಕೈಬೀಸಿದರು. ಪಂಪ್‌ವೆಲ್‌ನಿಂದ ಪ್ರಜಾಸೌಧದವರೆಗಿನ ಸಂಪೂರ್ಣ ರಸ್ತೆ ಮಾರ್ಗವು ಜನಸಾಗರದಿಂದ ತುಂಬಿಹೋಗಿತ್ತು. ಸುಡುವ ಬಿಸಿಲಿದ್ದರೂ ನಾಯಕರನ್ನು ಕಣ್ಣುಂಬಿಕೊಳ್ಳಲು ನೆರೆದಿದ್ದ ಜನರ ಉತ್ಸಾಹಕ್ಕೆ ಕಡಿಮೆಯಾಗಿರಲಿಲ್ಲ.

​ತುಳುನಾಡಿನ ಕಲಾ ವೈಭವದ ರಂಗು:

ಮೆರವಣಿಗೆಯ ಹಾದಿಯುದ್ದಕ್ಕೂ ಕರಾವಳಿಯ ಜಾನಪದ ಸಂಸ್ಕೃತಿ ಅನಾವರಣಗೊಂಡಿತು. ಡೊಳ್ಳು ಕುಣಿತ, ಕೊಂಬು-ಕಹಳೆ, ಕೇರಳ ಚಂಡೆ, ಗೊಂಬೆಗಳು ಮೆರವಣಿಗೆಗೆ ಕಳೆ ನೀಡಿದವು. ರಾಜ್ಯ ನಾಯಕರನ್ನು ಸ್ವಾಗತಿಸಲು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಹೂಮಳೆಗರೆದು ನಾಯಕರಿಗೆ ಸಾಂಪ್ರದಾಯಿಕ ಗೌರವ ಸಮರ್ಪಿಸಲಾಯಿತು.

​ಪ್ರಜಾಸೌಧದ ಆವರಣದಲ್ಲಿ ಹಬ್ಬದ ಸಡಗರ:

ಮೆರವಣಿಗೆಯ ಅಂತಿಮ ಘಟ್ಟವಾದ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ) ಮುಂಭಾಗದಲ್ಲಂತೂ ಸಹಸ್ರಾರು ಸಂಖ್ಯೆಯ ಜನರು ನೆರೆದು ನಾಯಕರನ್ನು ಹರ್ಷೋದ್ಗಾರಗಳೊಂದಿಗೆ ಬರಮಾಡಿಕೊಂಡರು. ಸ್ಥಳದಲ್ಲಿದ್ದ ವಿವಿಧ ಜಾನಪದ ಕಲಾತಂಡಗಳು ವಾತಾವರಣಕ್ಕೆ ಇನ್ನಷ್ಟು ಮೆರಗು ತಂದವು. ಇಡೀ ಜಿಲ್ಲಾಧಿಕಾರಿ ಕಚೇರಿಯ ಆವರಣವು ಸಂಪೂರ್ಣ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here