ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ರಾಜ್ಯ ಸಂಪುಟದ ಪ್ರಾರ್ಥನೆ: ಡಿ.ಕೆ. ಶಿವಕುಮಾರ್ ತಂಡಕ್ಕೆ ತುಳುನಾಡ ಸಾಂಪ್ರದಾಯಿಕ ಸ್ವಾಗತ – ರಾಜ್ಯದ ಸುಭಿಕ್ಷೆಗಾಗಿ ದೇವರ ಬಳಿ ಪ್ರಾರ್ಥನೆ

ಮಂಗಳೂರು: ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆಗೆ ಮುನ್ನ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ತಂಡ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ 11.15ರ ವೇಳೆಗೆ ದೇವಸ್ಥಾನದ ಆವರಣಕ್ಕೆ ಆಗಮಿಸಿದ ರಾಜ್ಯದ ನಾಯಕರನ್ನು ಸಾಂಪ್ರದಾಯಿಕ ‘ಪೂರ್ಣಕುಂಭ’ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು. ಪ್ರವೇಶದ್ವಾರದ ಬಳಿ ‘ಗೃಹಲಕ್ಷ್ಮಿ’ ಹಾಗೂ ‘ಶಕ್ತಿ’ ಯೋಜನೆಗಳ ಫಲಾನುಭವಿ ಮಹಿಳೆಯರು ತುಳುನಾಡಿನ ಸಾಂಪ್ರದಾಯಿಕ ‘ಮುಟ್ಟಾಳೆ’ ಧರಿಸಿ, ಯಕ್ಷಗಾನ ಕಲಾವಿದರ ಉಪಸ್ಥಿತಿಯಲ್ಲಿ ಪನ್ನೀರು ಚಿಮುಕಿಸಿ, ಮಂಗಳಾರತಿ ಎತ್ತಿ ಹಾಗೂ ಪುಷ್ಪವೃಷ್ಟಿಗೈದು ಅದ್ಧೂರಿಯಾಗಿ ಸ್ವಾಗತಿಸಿದರು.

​ಪುರೋಹಿತರ ನೇತೃತ್ವದಲ್ಲಿ ವಿಶೇಷವಾಗಿ ಬೆಳಗ್ಗೆ 11:30ಕ್ಕೆ ದೀಪ ಪ್ರಜ್ವಲಿಸಿ ಪಂಚಾಮೃತ ಪುರಸ್ಸರ ಏಕಾದಶ ರುದ್ರಾಭಿಷೇಕ ಹಾಗೂ ಬ್ರಹ್ಮಾರ್ಪಣೆ ನೆರವೇರಿಸಲಾಯಿತು.

ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ, ರಾಜ್ಯದ ಸುಭಿಕ್ಷೆ ಹಾಗೂ ಜನತೆಯ ಸುಖ-ಶಾಂತಿಗಾಗಿ ವಿಶೇಷ ಸಂಕಲ್ಪವನ್ನು ದೇವರ ಸಮಕ್ಷಮದಲ್ಲಿ ಮಾಡಲಾಯಿತು. ದೇವಸ್ಥಾನದ ವತಿಯಿಂದ ನಾಯಕರಿಗೆ ಶೇಷವಸ್ತ್ರ, ಶಾಲು ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು.

​ಸಾರ್ವಜನಿಕ ಅನ್ನಸಂತರ್ಪಣೆ:

ಕಂಪ್ಯೂಟರ್ ಸಭೆಯ ಹಿನ್ನೆಲೆಯಲ್ಲಿ ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here