


ಮಂಗಳೂರು: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆ ಐತಿಹಾಸಿಕ ಯಶಸ್ಸು ಕಂಡಿದೆ. ವಿಪಕ್ಷಗಳು ಭಾವನೆಗಳ ಮೇಲೆ ರಾಜಕೀಯ ಮಾಡಿದರೆ, ಕಾಂಗ್ರೆಸ್ ಜನರ ಭಾವನೆಗಳಿಗೆ ಗೌರವ ಕೊಡುವ ಮತ್ತು ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡಿದೆ. ಕರಾವಳಿ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.





ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ವಿರೋಧ ಪಕ್ಷದವರು ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು, ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಮಾತಿನಲ್ಲಿ ಅಲ್ಲ, ಕೆಲಸದ ಮೂಲಕ ಉತ್ತರಿಸಿದೆ. ರಾಜಕೀಯಕ್ಕಿಂತ ನಮಗೆ ಅಭಿವೃದ್ಧಿಯೇ ಮುಖ್ಯ ಎಂಬುದನ್ನು ಈ ಸಂಪುಟ ಸಭೆಯ ನಿರ್ಣಯಗಳು ಸಾಬೀತುಪಡಿಸಿವೆ ಎಂದು ಹೇಳಿದರು.


ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಡಿಸಿ ಮನ್ನಾ ಭೂಮಿ ಮಂಜೂರು ಮಾಡುವ ಕುರಿತು ಶೀಘ್ರದಲ್ಲೇ ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗಿರದೆ, ಈ ಭಾಗದ ಹಿರಿಯ ನಾಯಕರು ಹಾಕಿಕೊಟ್ಟ ಹಾದಿಯಲ್ಲಿ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಸರ್ಕಾರದ ಈ ಎಲ್ಲಾ ಜನಪರ ಮತ್ತು ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಸಂಪೂರ್ಣ ಸಹಕಾರ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಮನವಿ ಮಾಡಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಅಪ್ಪಿ, ಶುಭೋದಯ ಆಳ್ವ, ನವಾಝ್ ಇದ್ದರು.
ರೆಹಮಾನ್ ಕೊಲೆ ಆರೋಪಿಗಳ ವಿಚಾರದಲ್ಲಿ ನಿಯಮಾನುಸಾರ ಕ್ರಮ: ಪದ್ಮರಾಜ್
ಅಬ್ದುಲ್ ರೆಹಮಾನ್ ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆ ಪ್ರಯೋಗಿಸಿರುವುದನ್ನು ವಿರೋಧಿಸಿ ವಿ.ಎಚ್.ಪಿ. ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಪದ್ಮರಾಜ್ ಆರ್. ಪೂಜಾರಿ, ದೇಶದಲ್ಲಿ ಸಂವಿಧಾನ ಹಾಗೂ ಕಾನೂನಿನ ಆಡಳಿತವಿದೆ. ಕಾನೂನು ತನ್ನದೇ ಆದ ಹಾದಿಯಲ್ಲಿ ನಿಯಮಾನುಸಾರ ಕೆಲಸ ಮಾಡುತ್ತದೆ. ಯಾರೇ ಆಗಲಿ ಸಂವಿಧಾನ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅದನ್ನು ತಡೆಯಲು ಸಂಬಂಧಪಟ್ಟ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತದೆ. ಇಲಾಖೆಯ ಕಾರ್ಯವೈಖರಿಯಲ್ಲಿ ಕಾಂಗ್ರೆಸ್ ಹಸ್ತಕ್ಷೇಪವಿಲ್ಲ ಎಂದರು.








