


ಮಂಗಳೂರು: ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಗಮನ ಸೆಳೆದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳ್ಳಂಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದರು.





ಬೆಳಗ್ಗೆ 6 ಗಂಟೆಗೆ ಬಂದರಿಗೆ ಭೇಟಿ ನೀಡಿದ ಸಿಎಂ, ಬಂದರು ಪ್ರದೇಶದ ವ್ಯವಸ್ಥೆಗಳನ್ನು ಕಣ್ಣಾರೆ ಕಂಡರು. ಬೋಟ್ ನಲ್ಲಿ ಪ್ರಯಾಣ ಮಾಡಿ ಬಂದರು ಅಭಿವೃದ್ಧಿಗೆ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಮೀನುಗಾರರ ಮುಖಂಡರಿಂದ ಮಾಹಿತಿ ಪಡೆದರು.


ಹೊಸ ಡಾಕ್, ಡ್ರೆಜ್ಜಿಂಗ್ ಬೇಡಿಕೆ:
ಸದ್ಯ 200 ಬೋಟ್ ಗಳಿಗೆ ಡಾಕ್ ವ್ಯವಸ್ಥೆ ಇದ್ದು, ಫಲ್ಗುಣಿ, ನೇತ್ರಾವತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ ಜಾಗದಲ್ಲಿ ಬೋಟ್ ಗಳಿಗೆ ಹೊಸ ಡಾಕ್ ಗಳನ್ನು ಮಾಡಿದರೆ ಹೆಚ್ಚಿನ ಬೋಟುಗಳು ತಂಗಲು ಅವಕಾಶವಾಗುತ್ತದೆ. ಇದಕ್ಕಾಗಿ ಡ್ರೆಡ್ಜಿಂಗ್ (ಹೂಳೆತ್ತುವುದು) ಮಾಡಬೇಕಾಗಿದೆ. 25 ವರ್ಷಗಳಿಂದ ಡ್ರೆಡ್ಜಿಂಗ್ ಆಗಿಲ್ಲ, ಎರಡು ನದಿ ಹಾಗೂ ಅಳಿವೆ ಬಾಗಿಲಲ್ಲಿ ಡ್ರೆಡ್ಜಿಂಗ್ ಮಾಡಬೇಕಾಗಿದೆ ಎಂದು ಮೀನುಗಾರ ಮುಖಂಡರಾದ ಚೇತನ್ ಬೆಂಗ್ರೆ ಹಾಗೂ ಮೋಹನ್ ಬೆಂಗ್ರೆ ಅವರು ಸಿಎಂಗೆ ವಿವರಿಸಿದರು.
ಬಂದರಿನ ತಟ ಪ್ರದೇಶದಲ್ಲಿ ಮರಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಬೇಕು. ಈ ಭಾಗದಲ್ಲಿ ಎಲ್ಲಿ ಆಳವಾದ ಜಾಗ ಇದೆ ಎಂದು ಚಾನಲ್ ಮಾರ್ಕಿಂಗ್ ಬಾಯ್ಸ್ ಗಳನ್ನು ಹಾಕಿದರೆ ಬೋಟುಗಳು ಸುಗಮವಾಗಿ ಸಾಗಲು ನೆರವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.
ವ್ಯಾಪಾರ ಸ್ಥಗಿತ- ಸಿಎಂ ಸಿಡಿಮಿಡಿ:
ಸಿಎಂ ಭೇಟಿ ಹಿನ್ನೆಲೆಯಲ್ಲಿ ಬಂದರಿನಲ್ಲಿ ವ್ಯಾಪಾರ ಮಾಡಲು ಮೀನುಗಾರರಿಗೆ ಅವಕಾಶ ನೀಡದಿರುವುದನ್ನು ಗಮನಿಸಿದ ಸಿಎಂ ಸಿಡಿಮಿಡಿಗೊಂಡರು. ಯಾವುದೇ ಕಾರಣಕ್ಕೂ ವ್ಯಾಪಾರ ನಿಲ್ಲಬಾರದು. ಇದರಿಂದ ಮೀನುಗಾರರು ಹಾಗೂ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಲಿದೆ. ವ್ಯಾಪಾರ ಪ್ರಾರಂಭಿಸಿ ಎಂದು ಸೂಚಿಸಿದರು.
ಅಕ್ರಮ, ಕಾನೂನು ಉಲ್ಲಂಘಿಸಿದರೆ ಕ್ರಮ:
ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದು ವ್ಯಾಪಾರ ವಹಿವಾಟ ನಡೆಸುತ್ತಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಮೂಲ ಸೌಕರ್ಯಗಳು ದೊರೆಯಬೇಕು, ವಾಹನ ಸಂಚಾರ ಸುಗಮವಾಗಿರಬೇಕು. ಇಲ್ಲಿ ರಸ್ತೆಯನ್ನು ನಿರ್ಬಂಧಿಸಿರುವುದು, ಅಕ್ರಮವಾಗಿ ಕಾಂಪೌಂಡ್ ಹಾಕಿರುವುದೆಲ್ಲವೂ ನನ್ನ ಗಮನಕ್ಕೆ ಬಂದಿದೆ. ಕಾನೂನು ಉಲ್ಲಂಘಿಸಿರುವವರು ಎಷ್ಟೇ ದೊಡ್ಡವರಾಗಿದ್ದರೂ, ಪ್ರಭಾವಶಾಲಿಗಳಾದರೂ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಖಾಸಗಿ ಆಸ್ತಿಯಾಗಿದ್ದರೆ ದಾಖಲೆಗಳನ್ನು ನೋಡಿ ಸರ್ಕಾರದ ವಶಕ್ಕೆ ಪಡೆಯುತ್ತೇವೆ. ಅಭಿವೃದ್ಧಿ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಸಣ್ಣ ಮೀನುಗಾರರು ಬೋಟ್ ಗಳನ್ನು ನಿಲ್ಲಿಸುವ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಮೀನುಗಾರರ ಅಭಿವೃದ್ಧಿ ಗುರಿ:
ಕೆಲವೊಂದು ಸಮಸ್ಯೆಗಳನ್ನು ಮೀನುಗಾರರು ನೇರವಾಗಿ ಹಂಚಿಕೊಳ್ಳಲು ಸಾಧ್ಯವಾಗದೆ ಇರಬಹುದು, ಚಿಂತೆ ಇಲ್ಲ, ಗುಪ್ತ ವರದಿ ತರಿಸಿಕೊಳ್ಳುತ್ತೇನೆ. ಮಾಫಿಯಾಗಳು ಇವೆಯಾ, ತೊಂದರೆ ಆಗುತ್ತಿದೆಯಾ ಎನ್ನುವುದನ್ನು ಗಮನಿಸುತ್ತೇನೆ. ಒಟ್ಟಾರೆ, ನ್ಯಾಯಬದ್ಧವಾಗಿ ವ್ಯಾಪಾರ ವಹಿವಾಟು ನಡೆಯಬೇಕು. ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಗುರಿ ಎಂದರು.
ಹೂಳು ತೆಗೆಯುವ ಪ್ರಕ್ರಿಯೆಗೆ ಲೀಸ್ ಪಡೆಯಬೇಕೆ ಅಥವಾ ಯಂತ್ರ, ದೋಣಿಗಳನ್ನು ಖರೀದಿಸಿ ಹೂಳು ತೆಗೆಸಬೇಕೆ ಎನ್ನುವುದನ್ನು ತೀರ್ಮಾನಿಸುತ್ತೇನೆ ಎಂದರು
ಕರಾವಳಿ ಅಭಿವೃದ್ಧಿಗೆ 3-4 ಹೊಸ ನೀತಿ: ಸಿಎಂ
ಮಂಗಳೂರಿಗಾಗಿ ಅಭಿವೃದ್ಧಿ ಪಥದ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ. ಇದಕ್ಕಾಗಿ 3-4 ಹೊಸ ನೀತಿಗಳನ್ನು ಜಾರಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕರಾವಳಿಯಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹ ಕೊಡಬೇಕು. ಹೊಸದಾಗಿ ಹೂಡಿಕೆ ಮಾಡುವವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಅವರು ಬಂದಾಗ ಉಳಿದುಕೊಳ್ಳುವುದಕ್ಕೆ ಒಳ್ಳೆಯ ಹೊಟೇಲ್ ಗಳ ನಿರ್ಮಾಣ ಮಾಡಬೇಕು. ಇರುವ ಜಾಗವನ್ನು ಗುರಿತಿಸಿ ಕಾನೂನಿನ ಚೌಕಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ವಿವರಿಸಿದರು.
ಆರ್. ಅಶೋಕ್ ಗೆ ಮೀನು ಕಳುಹಿಸಿ ಆಸೆ ತೀರಿಸೋಣ:
ವಿರೋಧ ಪಕ್ಷದ ನಾಯಕ ಅಶೋಕ್ ಅವರು ಮುಖ್ಯಮಂತ್ರಿಗಳು ಮೀನು ತಿನ್ನೋದಕ್ಕೆ ಮಂಗಳೂರಿಗೆ ಹೋಗಿದ್ದಾರೆ ಎಂದಿದ್ದಾರೆ. ಅವರಿಗೆ ಮೀನು ತಿನ್ನುವ ಆಸೆಯಾಗಿದೆ. ಮಂಗಳೂರಿನಿಂದಲೇ ಮೀನನ್ನು ಕಳುಹಿಸಿ, ಅವರ ಆಸೆ ತೀರಿಸೋಣ ಎಂದು ಡಿಕೆಶಿ ತಿರುಗೇಟು ನೀಡಿದರು.
ಕಸ್ತೂರಿ ರಂಗನ್: ಅಭಿಪ್ರಾಯ ಸಂಗ್ರಹದ ಬಳಿಕ ತೀರ್ಮಾನ
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಲಾಗಿದೆ. ಅಲ್ಲಿ ಚರ್ಚೆ ಮಾಡುವ ಮುನ್ನ ಈ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಲು ಭೇಟಿ ನೀಡುತ್ತಿದ್ದೇನೆ. ಜನರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ನಾವು ಕೇಂದ್ರದ ಅಧಿಸೂಚನೆ ವಿರುದ್ಧ ಕಠಿಣ ನಿಲುವು ತಾಳಬೇಕಾಗುತ್ತದೆಯೇ ಎಂಬುದನ್ನು ತೀರ್ಮಾನ ಮಾಡಲಾಗುವುದು. ನಮಗೆ ನಮ್ಮ ಜನರ ಬದುಕು ಮುಖ್ಯ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ, ಸಚಿವ ಸಂಪುಟ ಯೋಜನೆಗಳಿಗೆ ಹಣ ಹೇಗೆ ಹೊಂದಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ನುಡಿದಂತೆ ನಡೆಯುತ್ತೇವೆ. ಅದೇ ನಮ್ಮ ಶಕ್ತಿ ಎಂದರು.








