ಮೀನುಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ, ಡ್ರಡ್ಜಿಂಗ್‌ಗೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಚೇತನ್ ಬೆಂಗ್ರೆ ಮನವಿ

ಮಂಗಳೂರು: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ 70 ಕೋಟಿ ರು.ಗೂ ಯೋಜನೆಗಳಿಗೆ ಅನುಮೋದನೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷ ಚೇತನ್ ಬೆಂಗ್ರೆ, ಕರಾವಳಿ ಪ್ರದೇಶದಲ್ಲಿ ಡ್ರೆಜ್ಜಿಂಗ್ ಸಮಸ್ಯೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರೆಜ್ಜಿಂಗ್ ಸೇರಿದಂತೆ ಮೀನುಗಾರರ ಅನೇಕ ಸಮಸ್ಯೆಗಳ ಕುರಿತು ಸಿಎಂ ಡಿಕೆ ಶಿವಕುಮಾರ್ ಅವರ ಬಳಿ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು.

ನೇತ್ರಾವತಿ, ಫಲ್ಗುಣಿ ಹಾಗೂ ಅಳಿವೆಬಾಗಿಲು ಪ್ರದೇಶಗಳಲ್ಲಿ ಕಳೆದ 25 ವರ್ಷಗಳಿಂದ ಸಮರ್ಪಕ ಡ್ರೆಜ್ಜಿಂಗ್ ಆಗಿಲ್ಲ. ಡ್ರೆಜ್ಜಿಂಗ್ ನಡೆಸಲು ಟೆಂಡರ್ ಗೆ ಅರ್ಜಿಗಳೇ ಬರುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರವೇ ಸ್ವಂತ ಕಟ್ಟರ್ ಡ್ರೆಜ್ಜರ್ ಖರೀದಿಸಿ ಡ್ರೆಜ್ಜಿಂಗ್ ನಡೆಸಲು ಮುಂದಾಗಬೇಕಿದೆ. ಇದರಿಂದ ಮಂಗಳೂರು, ಮಲ್ಪೆ, ಕಾರವಾರ ಸೇರಿದಂತೆ ಕರ್ನಾಟಕದ 360 ಕಿ.ಮೀ. ಕರಾವಳಿ ತೀರದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಚೇತನ್ ಬೆಂಗ್ರೆ ಹೇಳಿದರು.

ಡ್ರೆಜ್ಜಿಂಗ್ ಮೂಲಕ ತೆಗೆಯುವ ಮರಳನ್ನು ಸಮುದ್ರಕ್ಕೆ ಚೆಲ್ಲುವ ಬದಲು, ನದಿ ಮತ್ತು ಸಮುದ್ರ ತೀರದಲ್ಲಿ ವಿವಿಧೆಡೆ ಹಾಕಿ ಡಾಕ್ ಗಳನ್ನು ನಿರ್ಮಿಸಬೇಕು. ಇದರಿಂದ ದಕ್ಕೆಯಲ್ಲಿ ಪಾರ್ಕಿಂಗ್ ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ 4,000ಕ್ಕೂ ಹೆಚ್ಚು ಬೋಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರು ಮೀನುಗಾರಿಕಾ ದಕ್ಕೆಗೆ ನೇರವಾಗಿ ಭೇಟಿ ನೀಡಿ ಮೀನುಗಾರರ ಕಷ್ಟ- ಸುಖಗಳಿಗೆ ಸ್ಪಂದಿಸಿರುವುದು ಮೀನುಗಾರ ಸಮುದಾಯದ ಸಂತೋಷಕ್ಕೆ ಕಾರಣವಾಗಿದೆ. ಸಿಎಂ ಮೀನುಗಾರರ ಸಂಕಷ್ಟಗಳನ್ನು ಆಲಿಸಿದ್ದು ಇದೇ ಮೊದಲು ಎಂದರು.

ಮುಖಂಡರಾದ ರವಿ ಶ್ರೀಯಾನ್, ಮ.ನ.ಪಾ ಮಾಜಿ ಕಾರ್ಪೊರೇಟರ್ ಗಳಾದ ಸರಳಾ ಕರ್ಕೇರ, ಕವಿತಾ ವಾಸು, ಕುಮಾರ್ ಮೆಂಡನ್, ಜಿಲ್ಲಾ ಮುಖಂಡರಾದ ನವೀನ್ ಕರ್ಕೇರ, ಪವಿತ್ರ ಕರ್ಕೇರ ಇದ್ದರು.

LEAVE A REPLY

Please enter your comment!
Please enter your name here