


ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಡಿ.ಸಿ. ಮನ್ನಾ ಭೂಮಿ ಹಂಚಿಕೆಯ ಸಮಸ್ಯೆ ಇತ್ಯರ್ಥಪಡಿಸುವುದಾಗಿ ನೀಡಿದ್ದ ಆಶ್ವಾಸನೆ ಈಡೇರಿಲ್ಲ. ಸರ್ಕಾರದ ದಲಿತ ವಿರೋಧಿ ನೀತಿಗಳ ವಿರುದ್ಧ ವಿವಿಧ ಹಂತಗಳಲ್ಲಿ ತೀವ್ರ ಹೋರಾಟ ರೂಪಿಸಲು ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಿರ್ಧರಿಸಿದೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿಯ ಮುಖಂಡ ರಘು ಕೆ. ಎಕ್ಕಾರ್, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ, ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಂಪುಟ ಸಭೆಯಲ್ಲೇ ಈ ಭೂಮಿ ಹಂಚಿಕೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಸಂಪುಟ ಸಭೆ ಮುಗಿದರೂ ಕೊಟ್ಟ ಭರವಸೆ ಈಡೇರಿಸದೆ ದಲಿತ ಸಮುದಾಯಕ್ಕೆ ದ್ರೋಹ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ 30 ವರ್ಷಗಳಿಂದ ದಲಿತ ಸಂಘಟನೆಗಳು ಡಿ.ಸಿ. ಮನ್ನಾ ಭೂಮಿ ಹಂಚಿಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ನಿರಂತರ ಹೋರಾಟ ನಡೆಸುತ್ತಾ ಬಂದಿವೆ. ಪ್ರತಿ ಬಾರಿ ಜಿಲ್ಲಾಧಿಕಾರಿ ಸಭೆಯಲ್ಲಿ ಈ ವಿಷಯ ಬಂದಾಗ ‘ಡ್ರಾಫ್ಟ್ ರೂಲ್ಸ್-2017’ ತಿದ್ದುಪಡಿಯ ನೆಪ ಹೇಳಲಾಗುತ್ತಿದೆಯೇ ಹೊರತು, ಭೂಮಿ ಹಂಚಿಕೆ ಮಾಡಲು ಸಚಿವರು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. ಕರಾವಳಿ ಅಭಿವೃದ್ಧಿ, ದೇವಸ್ಥಾನಗಳು ಹಾಗೂ ಬಂಡವಾಳಶಾಹಿಗಳ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ನೀಡುವ ಸರ್ಕಾರ, ದಲಿತರ ನೋವಿಗೆ ಕಣ್ಣಾಗುತ್ತಿಲ್ಲ ಮತ್ತು ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಖಾದರ್ ಹೋದಲ್ಲೆಲ್ಲ ಪ್ರತಿಭಟನೆ:
ಅಶೋಕ್ ಕೊಂಚಾಡಿ ಮಾತನಾಡಿ, ಡಿಸಿ ಮನ್ನಾ ಸಂಪುಟದಿಂದ ತಪ್ಪಲು ಯು.ಟಿ. ಖಾದರ್ ಕಾರಣ. ಕಳೆದ 9 ವರ್ಷಗಳಿಂದ ಸುಳ್ಳು ಭರವಸೆ ನೀಡಲಾಗುತ್ತಿದ್ದು, ದಲಿತರ ಭೂಮಿಯನ್ನು ಕಬಳಿಸಿರುವ ದೊಡ್ಡ ದೊಡ್ಡ ಕುಳಗಳನ್ನು ರಕ್ಷಿಸಲು ಜಿಲ್ಲಾ ಉಸ್ತುವಾರಿ ಸಚಿವರೇ ನಿಂತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಳ್ಳುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಜನಾಭಿಪ್ರಾಯ ಮೂಡಿಸುವುದು, ಬಿತ್ತಿಪತ್ರ ಚಳುವಳಿ, ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನೆ, ಸಮಾವೇಶಗಳ ಮೂಲಕ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಸಮಿತಿಯ ಪ್ರಮುಖರಾದ ರಮೇಶ್ ಕೋಟ್ಯಾನ್, ಎಸ್.ಪಿ. ಆನಂದ, ಚಂದ್ರ ಕುಮಾರ್, ಗಿರೀಶ್ ಕುಮಾರ್ ಯು.ಕೆ., ರೋಹಿತ್ ಉಳ್ಳಾಲ್, ಕೃಷ್ಣಾನಂದ ಡಿ., ಜಗದೀಶ್ ಪಾಂಡೇಶ್ವರ, ಸರೋಜಿನಿ ಬಂಟ್ವಾಳ, ಯಶೋಧ ಹೊಸಬೆಟ್ಟು, ರಮೇಶ್ ಕಾವೂರು, ಸಂಜೀವ ಆರ್. ಬೆಳಂಗಡಿ ಇದ್ದರು.








