


ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್ ಬಳಿ ಇರುವ ರಾಮಲಕ್ಷ್ಮೀ ಸಭಾಭವನದಲ್ಲಿ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳ ಸಮಾರಂಭ ನಡೆಯುತ್ತಿದ್ದ ವೇಳೆ ಕಟ್ಟಡದ ಮೊದಲ ಮಹಡಿಯ ಶಿಥಿಲ ತಡೆಗೋಡೆ ಕುಸಿದುಬಿದ್ದ ಪರಿಣಾಮ ಐವರು ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬ ವಿದ್ಯಾರ್ಥಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.





ಕಸಬ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಹಳೆಯಂಗಡಿಯ ಮಹಮ್ಮದ್ ಶಮಾಜ್ (16) ಎಂಬವರಿಗೆ ಗಂಭೀರ ಗಾಯಗೊಂಡಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಸೂರಿಂಜೆಯ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರಿನ ಹನೀಫ್ (23), ಕಾವೂರು ಗಾಂಧಿನಗರದ ದಾವೂದ್ ಫರ್ಸಿನ್ ಅಹಮ್ಮದ್ (18) ಗಾಯಗೊಂಡವರು.


ರಾಮಲಕ್ಷ್ಮೀ ಸಭಾಭವನದಲ್ಲಿ ವಿದ್ಯಾರ್ಥಿಗಳು ತಮ್ಮ ಸಂಘಟನೆಯ ಪದಾಧಿಕಾರಿಗಳ ಸಮಾರಂಭ ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಸಭಾಭವನದಲ್ಲಿ ಭಾರಿ ಜನದಟ್ಟಣೆ ಉಂಟಾಗಿತ್ತು. ಮೊದಲ ಮಹಡಿಯ ಕಾರಿಡಾರ್ನಲ್ಲಿ ಹೊರಗೆ ನಿಂತಿದ್ದ ಕೆಲವು ವಿದ್ಯಾರ್ಥಿಗಳು ಅಲ್ಲಿನ ತಡೆ ಗೋಡೆಗೆ ಒರಗಿ ನಿಂತಿದ್ದರು. ಗೋಡೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಏಕಾಏಕಿ ಕುಸಿದುಬಿದ್ದು, ಈ ದುರಂತ ಸಂಭವಿಸಿದೆ. ಗಾಯಗೊಂಡ ಎಲ್ಲ ಐವರೂ ವಿದ್ಯಾರ್ಥಿಗಳನ್ನು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓರ್ವ ವಿದ್ಯಾರ್ಥಿ ಮೆದುಳು ನಿಷ್ಕ್ರಿಯ ಸ್ಥಿತಿಯಲ್ಲಿದ್ದು, ಆತನ ಸಾವನ್ನು ವೈದ್ಯರು ಅಧಿಕೃತವಾಗಿ ದೃಢಪಡಿಸಿಲ್ಲ. ಆತನಿಗೆ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ನಿಗಾವಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದ ನಾಲ್ವರು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಯಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಭಾಭವನದ ಸುರಕ್ಷತಾ ಕ್ರಮಗಳ ಲೋಪ ಹಾಗೂ ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.








