


ಮಂಗಳೂರು: ಆಯೋಗದ ಅಕ್ರಮಗಳು ಹಾಗೂ ತಾರತಮ್ಯ ನೀತಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೆ.28ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 10:30ಕ್ಕೆ ಮಂಗಳೂರಿನ ಮಹಾವೀರ (ಪಂಪ್ವೆಲ್) ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದವರೆಗೆ ಸಾಗಲಿದೆ. ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂವಿಧಾನದಲ್ಲಿ ನಂಬಿಕೆಯುಳ್ಳ ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದರು.


ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಪದ್ಮರಾಜ್ ಪೂಜಾರಿ ಆಗ್ರಹಿಸಿದರು.


ಆಯೋಗದ ಇಬ್ಬರು ಸಹ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಹಾಗೂ ಡಾ. ವಿವೇಕ್ ಜೋಶಿ ಅವರು ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರಗಳ ವಿರುದ್ಧ 14 ಬಾರಿ ಆಕ್ಷೇಪಣೆ ಸಲ್ಲಿಸಿದ್ದರೂ, ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಕಾರ್ಯಾಚರಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎತ್ತಿದ್ದ ‘ಮತ ಕಳವು’ ಆರೋಪ ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ನಡೆದ ಅಕ್ರಮಗಳು ಈಗ ಸತ್ಯವೆಂದು ಸಾಬೀತಾಗುತ್ತಿವೆ ಎಂದು ಪದ್ಮರಾಜ್ ದೂರಿದರು.
ಪ್ರತಾಪ್ ಸಿಂಹ ತುಳುನಾಡಿನ ಕ್ಷಮೆ ಯಾಚಿಸಲಿ:
ರಾಜ್ಯದ ಕಾಂಗ್ರೆಸ್ ಸರ್ಕಾರ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಆಡಳಿತ ಭಾಷೆಯಾಗಿ ಮಾನ್ಯತೆ ನೀಡಿ ತುಳುನಾಡಿನ ಜನರ ಸ್ವಾಭಿಮಾನ ಹಾಗೂ ಭಾವನೆಗಳಿಗೆ ಗೌರವ ನೀಡಿದೆ. ಆದರೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು “ಇದರಿಂದ ಲಾಭವೇನು?” ಎಂದು ಪ್ರಶ್ನಿಸುವ ಮೂಲಕ ತುಳುನಾಡಿನ ಜನರಿಗೆ ಅಪಮಾನ ಮಾಡಿದ್ದಾರೆ. ಪ್ರತಾಪ್ ಸಿಂಹ ಅವರು ತಕ್ಷಣವೇ ತುಳುನಾಡಿನ ಜನರ ಕ್ಷಮೆ ಯಾಚಿಸಬೇಕು ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಅವರಿಗೆ ಸೂಕ್ತ ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಿದರು.
ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ₹16,000 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಘೋಷಿಸಿದೆ. ಮಂಗಳೂರನ್ನು ಹೂಡಿಕೆದಾರರ ಕೇಂದ್ರವಾಗಿಸಲು ‘ಇನ್ವೆಸ್ಟರ್ಸ್ ಮೀಟ್’ ಹಾಗೂ ಆಸ್ಪತ್ರೆ, ರಸ್ತೆ, ಬಂದರುಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ಈ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಾಗೂ ನಾಯಕರು ರಾಜ್ಯದ ಹಕ್ಕಿನ ತೆರಿಗೆ ಪಾಲಿಗಾಗಿ ಕೇಂದ್ರದ ವಿರುದ್ಧ ಧ್ವನಿ ಎತ್ತದೆ ಮೌನವಾಗಿದ್ದಾರೆ. ಆ ಕೆಲಸ ಮೊದಲು ಮಾಡಲಿ ಎಂದು ಆಗ್ರಹಿಸಿದರು.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಉಚಿತ ಕೊಡುಗೆಗಳೆಂದು ಅಪಹಾಸ್ಯ ಮಾಡಿದ ಬಿಜೆಪಿ ನಾಯಕರು, ಅದೇ ಯೋಜನೆಗಳನ್ನು ಬೇರೆ ರಾಜ್ಯಗಳಲ್ಲಿ ಕಾಪಿ ಮಾಡಿ ‘ಮೋದಿ ಗ್ಯಾರಂಟಿ’ ಹೆಸರಿನಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪದ್ಮರಾಜ್ ಪೂಜಾರಿ ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಗೇರು ನಿಗಮ ಮಂಡಳಿ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಪುರುಷೋತ್ತಮ ಚಿತ್ರಾಪುರ, ಜೆ.ಅಬ್ದುಲ್ ಸಲೀಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಎಸ್. ಅಪ್ಪಿ, ನೀರಜ್ ಚಂದ್ರ ಪಾಲ್, ಶುಭೋದಯ ಆಳ್ವ, ಲ್ಯಾನ್ಸಿ ಲಾಟ್ ಪಿಂಟೋ, ಅನಿಲ್ ಕುಮಾರ್ ಪೂಜಾರಿ, ಶುಭಾಶ್ ಶೆಟ್ಟಿ ಕೊಲ್ನಾಡ್ ಇದ್ದರು.







