ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: 50 ಎಕರೆ ಜಮೀನು ಮಂಜೂರಾತಿಗೆ ಮುಡಾ ಅಧ್ಯಕ್ಷರಿಗೆ ಕೆಎಸ್‌ಸಿಎ ಅಧ್ಯಕ್ಷ ಪತ್ರ

ಮಂಗಳೂರು: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಆಗುವ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆ ನಡೆದಿದ್ದು, ಇದಕ್ಕಾಗಿ 50 ಎಕರೆ ಸರ್ಕಾರಿ ಭೂಮಿ ಒದಗಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಅಧ್ಯಕ್ಷ ಬಿ.ಕೆ. ವೆಂಕಟೇಶ ಪ್ರಸಾದ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸುಮಾರು 50 ಎಕರೆ ಸರ್ಕಾರಿ ಭೂಮಿಯನ್ನು ನೇರ ಖರೀದಿ ಅಥವಾ 50 ವರ್ಷಗಳ ದೀರ್ಘಾವಧಿ ಗುತ್ತಿಗೆ ಆಧಾರದ ಮೇಲೆ ಕೆಎಸ್‌ಸಿಎಗೆ ಮಂಜೂರು ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ. ಅಲ್ಲದೆ, ಶಿಕ್ಷಣ ಮತ್ತು ಕ್ರೀಡಾ ಸಂಸ್ಥೆಗಳಿಗೆ ಸಾಮಾನ್ಯವಾಗಿ ನೀಡಲಾಗುವ ಕನಿಷ್ಠ ಅಥವಾ ರಿಯಾಯಿತಿ ದರದಲ್ಲೇ ಈ ಜಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಲಾಗಿದೆ.

ಕ್ರಿಕೆಟ್ ಸೆಂಟರ್ ಆಫ್ ಎಕ್ಸಲೆನ್ಸ್ ನಿರ್ಮಾಣ:

ಮಂಜೂರಾಗುವ ಜಮೀನನ್ನು ಸಂಪೂರ್ಣವಾಗಿ ಕ್ರಿಕೆಟ್ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಲಾಗುವುದು. ಭೂಮಿ ಹಸ್ತಾಂತರವಾದ ದಿನದಿಂದ 3 ವರ್ಷದೊಳಗೆ ಹಂತ-ಅತ್ಯಾಧುನಿಕ ಸಬ್ ಸರ್ಫೇಸ್ ಡ್ರೈನೇಜ್, ಅಭ್ಯಾಸ ಪಿಚ್‌ಗಳು, ತರಬೇತಿ ಅಕಾಡೆಮಿ ಹಾಗೂ ಇತರ ಎಲ್ಲ ಅಗತ್ಯ ಸೌಲಭ್ಯಗಳನ್ನು ಕೆಎಸ್‌ಸಿಎ ತನ್ನದೇ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ. ಇದನ್ನು ರಾಜ್ಯದ ಮಾದರಿ ಕ್ರಿಕೆಟ್ ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ರೂಪಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಕರ್ನಾಟಕ ರಾಜ್ಯ ರಣಜಿ ಹಾಗೂ ಹಿರಿಯರ ಕ್ರಿಕೆಟ್ ತಂಡದಲ್ಲಿ ಶೇ.40ಕ್ಕೂ ಹೆಚ್ಚು ಆಟಗಾರರು ಬೆಂಗಳೂರು ಹೊರತುಪಡಿಸಿ ಕರಾವಳಿ ಮತ್ತು ಇತರ ಜಿಲ್ಲೆಗಳ ಗ್ರಾಮೀಣ ಭಾಗದಿಂದಲೇ ಆಯ್ಕೆಯಾಗುತ್ತಿದ್ದಾರೆ. ಇಂತಹ ಅದ್ಭುತ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸೂಕ್ತ ತರಬೇತಿ ಮತ್ತು ವೇದಿಕೆ ಅನಿವಾರ್ಯ. ಜಿಲ್ಲಾ ಕೇಂದ್ರವಾಗಿರುವ ಮಂಗಳೂರಿನಲ್ಲಿ ಈ ಮೂಲಸೌಕರ್ಯ ತುರ್ತಾಗಿ ಆಗಬೇಕಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಇತ್ತೀಚೆಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಭೇಟಿಯಾಗಿ ಈ ಕುರಿತು ಮಹತ್ವದ ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here