ಬೆಂಗ್ರೆಯಿಂದ ಕರಂಗಲ್ಪಾಡಿವರೆಗೆ ಕಾಮಗಾರಿ ಪರಿಶೀಲನೆ, ಸ್ಥಳೀಯರ ಸಮಸ್ಯೆ ಆಲಿಸಿದ ಪಾಲಿಕೆ ಆಯುಕ್ತ – ಬೀಚ್ ಹಾಗೂ ಜಲ ಮೂಲ ಸ್ವಚ್ಛತೆಗೆ 3 ದಿನದೊಳಗೆ ಕಾರ್ಯಯೋಜನೆ ಸಿದ್ಧಪಡಿಸಲು ಸೂಚನೆ – ಕರಂಗಲಪಾಡಿಯಲ್ಲಿ ಒಳಚರಂಡಿ ಸಮಸ್ಯೆ ಬಗೆಹರಿಸಲು ಭರವಸೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ವಿವಿಧ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಬೆಂಗ್ರೆ ಮಹಾಜನ ಸಭಾ ಮನವಿಯ ಮೇರೆಗೆ ಆಯುಕ್ತರು ಸುಲ್ತಾನ್ ಬತ್ತೇರಿಯಿಂದ ಕಸ್ಬಾ ಬೆಂಗ್ರೆಗೆ ದೋಣಿ ಮೂಲಕ ಪ್ರಯಾಣಿಸಿ, ಅಲ್ಲಿನ ಮುಖಂಡರು ಹಾಗೂ ಸ್ಥಳೀಯರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದರು.

ಸ್ಥಳೀಯರು ಪ್ರಸ್ತಾಪಿಸಿದ ಸಮಸ್ಯೆಗಳ ಕುರಿತು ಸಭೆ ನಡೆಸಿದ ಆಯುಕ್ತರು, ಸ್ವಯಂಸೇವಾ ಸಂಸ್ಥೆಗಳು ಹಾಗೂ 600ರಿಂದ 1,000 ವಿದ್ಯಾರ್ಥಿಗಳಿರುವ ಶಾಲೆಗಳ ಸಹಕಾರದೊಂದಿಗೆ ಬೀಚ್‌ಗಳು ಮತ್ತು ಜಲಮೂಲಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಲಮೂಲಗಳಿಂದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ತೆರವುಗೊಳಿಸಲು ವೇಸ್ಟ್ ಟ್ರ್ಯಾಪ್‌ಗಳನ್ನು ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂಬಂಧ ಮೂರು ದಿನಗಳೊಳಗೆ ಕಾರ್ಯಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.

ಬಳಿಕ ಕರಂಗಲಪಾಡಿಯಲ್ಲಿ ಒಳಚರಂಡಿ ಸಮಸ್ಯೆಗಳನ್ನು ಆಲಿಸಿದ ಆಯುಕ್ತರು, 10 ದಿನಗಳೊಳಗೆ ಕಾಮಗಾರಿಯ ಅಂದಾಜು ಸಿದ್ಧಪಡಿಸಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮಗೊಳಿಸುವುದಾಗಿ ತಿಳಿಸಿದರು. ಸಮಸ್ಯೆಯ ತಾಂತ್ರಿಕ ಅಂಶಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಜ್ಜೋಡಿ ಮಹಾಕಾಳಿ ದೇವಸ್ಥಾನದ ಸಮೀಪ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗೆ ಭೇಟಿ ನೀಡಿದ ಆಯುಕ್ತರು ಕಾಮಗಾರಿಯನ್ನು ಪರಿಶೀಲಿಸಿದರು. ನಿರ್ಮಾಣಕ್ಕೆ ಸಂಬಂಧಿಸಿದ ಬ್ಲೂಪ್ರಿಂಟ್‌ನ್ನು ಸಮಗ್ರವಾಗಿ ಪರಿಶೀಲಿಸಿ, ಸಾರ್ವಜನಿಕರ ಅನುಕೂಲಕ್ಕೆ ಯಾವ ರೀತಿಯ ಕಾಮಗಾರಿ ಸೂಕ್ತವಾಗಿರುತ್ತದೆ ಎಂಬುದನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ನಡುಪಾಲಿ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಜೆಪ್ಪು– ಕುಡುಪಾಡಿ ಪ್ರದೇಶಕ್ಕೂ ಭೇಟಿ ನೀಡಿದ ಅವರು, ಅಲ್ಲಿ ನಡೆಯುತ್ತಿರುವ ತಡೆಗೋಡೆ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

ಭೇಟಿಯ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಕೆಪಿಟಿಸಿಎಲ್ ಅಧಿಕಾರಿಗಳು, ಸಮುದಾಯ ಸಂಘಟಕರು ಹಾಗೂ ಸ್ಥಳೀಯರು ಇದ್ದರು.

LEAVE A REPLY

Please enter your comment!
Please enter your name here