


ಮಂಗಳೂರು: ನಗರದ ಸಂತ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜಾ ಅವಧಿಯಲ್ಲಿ ಪದವಿ ಸೆಮಿಸ್ಟರ್ ಪರೀಕ್ಷೆ ನಿಗದಿಪಡಿಸಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ಸಂಘಟನೆ ಪ್ರೇರಿತ ಕೆಲವು ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿ, ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ.





ಈ ಸಂದರ್ಭ ಎಬಿವಿಪಿ ಮತ್ತು ಇತರ ಕಾಲೇಜಿನ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರೆ, ಪರೀಕ್ಷೆ ಬಹಿಷ್ಕರಿಸಿದ ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನದವರೆಗೆ ಪ್ರತಿಭಟನೆ ಮುಂದುವರಿಸಿದರು.


ಬೆಳಗ್ಗಿನಿಂದಲೇ ಧರಣಿ:
ಪದವಿ ಸೆಮಿಸ್ಟರ್ ಪರೀಕ್ಷೆಯನ್ನು ಸೋಮವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ಮತ್ತು ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜು ಗೇಟ್ ಎದುರು ಜಮಾಯಿಸಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಪೊಲೀಸರು ಆಗ್ನೆಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಎಬಿವಿಪಿ ಕಾರ್ಯಕರ್ತರು ಮತ್ತು ಇತರ ಕಾಲೇಜಿನ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಸ್ವಲ್ಪ ಹೊತ್ತಿನಲ್ಲಿ ಎಬಿವಿಪಿಯ ಇನ್ನೊಂದು ಗುಂಪು ಕಾಲೇಜಿನ ಎದುರು ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದರು.
19, 22ರ ಪರೀಕ್ಷೆ ಮುಂದೂಡಿಕೆ:
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಾಲೇಜಿನ ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕಿ ಶುಭರೇಖಾ ಮಾತನಾಡಿ, ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 19 ಮತ್ತು 22ರಂದು ನಿಗದಿಪಡಿಸಲಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ. ಪ್ರತಿಭಟನೆಯನ್ನು ಕೈಬಿಟ್ಟು, ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಹಕರಿಸಿ ಶಾಂತಿಯುತ ಶೈಕ್ಷಣಿಕ ವಾತಾವರಣವನ್ನು ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.
————
ಬಾಕ್ಸ್
ತಿಂಗಳ ಹಿಂದೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದಾಗ ಬಾರದ ಆಕ್ಷೇಪ
ಕಾಲೇಜಿನಲ್ಲಿ ಪ್ರತಿವರ್ಷ ಅಕ್ಟೋಬರ್ನಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತವೆ. ಈ ಬಾರಿಯ ಪರೀಕ್ಷೆಯ ಮೊದಲ ಕರಡು ವೇಳಾಪಟ್ಟಿಯನ್ನು ಸೆಪ್ಟೆಂಬರ್ 11ರಂದೇ ಪ್ರಕಟಿಸಲಾಗಿತ್ತು. ಮಾತ್ರವಲ್ಲದೆ, ಈ ಕುರಿತು ವಿದ್ಯಾರ್ಥಿಗಳ ಸಲಹೆ ಇದ್ದರೆ ರಿಜಿಸ್ಟ್ರಾರ್ ಅವರಿಗೆ ತಿಳಿಸುವಂತೆ ಹೇಳಲಾಗಿತ್ತು. ಆ ಸಂದರ್ಭ ವಿದ್ಯಾರ್ಥಿಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿಯೇ ಇಲ್ಲ. ಪರೀಕ್ಷೆಗಳ ನಡುವೆ ಹೆಚ್ಚಿನ ರಜೆ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು, ಅದರಂತೆ ಪರೀಕ್ಷೆಯ ಅಂತಿಮ ವೇಳಾಪಟ್ಟಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿ ಕೊಡಲಾಗಿತ್ತು. ಇದೀಗ ನವೆಂಬರ್ 2ರಿಂದ ಇಂಟರ್ನ್ಶಿಪ್ಗಳು ಮತ್ತು 10 ದಿನಗಳ ಎನ್ಎಸ್ಎಸ್ ಶಿಬಿರಗಳು ನಿಗದಿಯಾಗಿರುವುದರಿಂದ ಪರೀಕ್ಷೆ ದಿನಾಂಕ ಬದಲಾವಣೆ ಕಷ್ಟವಾಗುತ್ತಿದೆ. ಆದರೂ ಅಕ್ಟೋಬರ್ 19 ಮತ್ತು 22ರ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ರಿಜಿಸ್ಟ್ರಾರ್ ತಿಳಿಸಿದರು.








