


– ನೀರು ಮತ್ತು ಮೇವಿಗಾಗಿ ರೈತರು ಪರದಾಡುತ್ತಿರುವಾಗ ಲಕ್ಷಾಂತರ ಲೀ. ನೀರು ಪೋಲು ಮಾಡಿ ಕಂಬಳ ಮಾಡುವ ಅಗತ್ಯವೇನು?


ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳದ ಮೇಲೆ ಅಪಾರ ಗೌರವ ಮತ್ತು ಅಭಿಮಾನವಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ತೀವ್ರ ಭೀಕರ ಬರಗಾಲದ್ದು, ನೀರು- ಮೇವಿಗಾಗಿ ರೈತರು ಸಂಕಷ್ಟದಲ್ಲಿರುವ ಕಾರಣ ಮೈಸೂರಿನಲ್ಲಿ ಕಂಬಳ ಕ್ರೀಡೆ ಆಯೋಜಿಸುವುದು ಸೂಕ್ತವಲ್ಲ, ಇದನ್ನು ಕೈಬಿಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆಗ್ರಹಿಸಿದ್ದಾರೆ.





ಮಂಗಳೂರಿನಲ್ಲಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಗಾಲಕ್ಕೆ ಸಿಲುಕಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅಂತರ್ಜಲ ಕುಸಿದು ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ. ಮೈಸೂರು ಜಿಲ್ಲೆಯಲ್ಲೂ 2991 ಕೆರೆಗಳ ಪೈಕಿ 2928 ಕೆರೆಗಳು ಒಣಗಿದ್ದು, ಕೇವಲ 63 ಕೆರೆಗಳನ್ನು ಮಾತ್ರ ಕಾಲುವೆ ನೀರಿಂದ ತುಂಬಿಸಲಾಗಿದೆ. ಮೈಸೂರು ನಗರದ 10 ಕಿ.ಮೀ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಬತ್ತಿಹೋಗಿದ್ದು, ಕಾವೇರಿ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಇಂಥ ಸಮಯದಲ್ಲಿ ಲಕ್ಷಾಂತರ ಲೀ. ನೀರು ಪೋಲು ಮಾಡಿ ಕಂಬಳ ಮಾಡುವ ಅಗತ್ಯವೇನು? ರೈತರು ನೀರಿಲ್ಲದೆ ತೀವ್ರ ಸಂಕಷ್ಟದಲ್ಲಿರುವಾಗ ಸಂಭ್ರಮವೇ ಇಲ್ಲದ ಪರಿಸ್ಥಿತಿಯಲ್ಲಿ ಕಂಬಳ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂದು ಹೇಳಿದರು.
ಪರಿಸರ ನಾಶ ಮತ್ತು ಉದ್ಯಾನವನ ಒತ್ತುವರಿ:
ಕಂಬಳಕ್ಕಾಗಿ ಆಯ್ಕೆ ಮಾಡಿರುವ ಜಾಗವು ಮೂಲತಃ ಉದ್ಯಾನವನಕ್ಕೆ ಮೀಸಲಾಗಿತ್ತು. ಅಲ್ಲಿ ನೂರಾರು ಮರಗಳು, ಗಿಡಗಂಟಿಗಳು ಹಾಗೂ ಸಣ್ಣಪುಟ್ಟ ಪ್ರಾಣಿ- ಪಕ್ಷಿಗಳ ಜೀವಪರಿಸರ ವ್ಯವಸ್ಥೆ ಇತ್ತು. ಆದರೆ ಕಂಬಳ ಕ್ರೀಡೆಗಾಗಿ 50ಕ್ಕೂ ಹೆಚ್ಚು ಮರಗಳನ್ನು ಕಡಿದು, ಕೆರೆಯ ಅಂಗಳವನ್ನು ಮುಚ್ಚಿ ಪರಿಸರ ನಾಶಪಡಿಸಲಾಗಿದೆ. ಮರ ಕಡಿದಿರುವ ಈ ಕೃತ್ಯಕ್ಕೆ ಅರಣ್ಯ ಇಲಾಖೆಯೇ ಎಫ್ಐಆರ್ ದಾಖಲಿಸಿದೆ. ಬರಗಾಲದ ವೇಳೆ ಪರಿಸರವನ್ನೂ ಹಾಳು ಮಾಡಿ, ಕೃತಕವಾಗಿ ಕಂಬಳ ಕರೆ ನಿರ್ಮಿಸಿ ನೀರನ್ನೂ ಪೋಲು ಮಾಡಿ ಕಂಬಳ ಮಾಡಬೇಕಾ ಎಂದು ಎ.ಟಿ. ರಾಮಸ್ವಾಮಿ ಪ್ರಶ್ನಿಸಿದರು.
ಸ್ವಯಂ ಪ್ರೇರಣೆಯಿಂದ ರದ್ದು ಮಾಡಿ:
ಮೈಸೂರಿನ ರಾಜವಂಶಸ್ಥರೂ ಕೂಡ ದಸರಾದಲ್ಲಿ ಕಂಬಳ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿಂದ ವಿವಿಧ ಸಂಘಟನೆಗಳು ಮತ್ತು ಸಾಹಿತಿಗಳು ವಿರೋಧಿಸುತ್ತಿದ್ದರೂ ಸರ್ಕಾರ ಹಾಗೂ ಕಂಬಳ ಆಯೋಜಕರು ಇದಕ್ಕೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಕರಾವಳಿಯ ಪ್ರಜ್ಞಾವಂತರು ಹಾಗೂ ಕಂಬಳ ಕೋಣಗಳ ಮಾಲೀಕರು ಸ್ವಯಂಪ್ರೇರಿತರಾಗಿ ನೋಂದಣಿ ರದ್ದುಪಡಿಸಿ ಈ ಕ್ರೀಡೆಯಿಂದ ಹಿಂದೆ ಸರಿಯಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪರಿಸರಕ್ಕಾಗಿ ನಾವು ಸಂಘದ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಹೋರಾಟಗಾರರಾದ ಲೀಲಾ ಶಿವಕುಮಾರ್ ಹಾಗೂ ಕುಸುಮ ಆಯರಹಳ್ಳಿ, ರೈಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಇದ್ದರು.
——
ಮೈಸೂರಿನಲ್ಲಿ ಕಂಬಳಕ್ಕಾಗಿ 30 ಟಿಪ್ಪರ್ ಮರಳು ತಂದು ಹಾಕಿದ್ದಾರೆ. ಮನೆ ಕಟ್ಟಲೂ ಮರಳು ಸಿಗದೆ ಇರುವಾಗ ಇವರಿಗೆ ಎಲ್ಲಿಂದ ಮರಳು ಸಿಕ್ಕಿತು?
– ಲೀಲಾ ಶಿವಕುಮಾರ್, ಪರಿಸರ ಹೋರಾಟಗಾರ್ತಿ








