


ಮಂಗಳೂರು: ನವರಾತ್ರಿ ಹಬ್ಬದ ಸಂದರ್ಭ ಪರೀಕ್ಷೆ ನಡೆಸಿದ ವಿಚಾರ ಮುಂದಿಟ್ಟುಕೊಂಡು ಎಬಿವಿಪಿ ಸಂಘಟನೆಯು ವ್ಯವಸ್ಥಿತವಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಗುರಿಯಾಗಿಸಿ ಟಾರ್ಗೆಟ್ ಮಾಡುತ್ತಿದೆ, ಇತರ ಕಾಲೇಜುಗಳಲ್ಲಿ ಪರೀಕ್ಷೆ ನಡೆದಿದ್ದರೂ ಅಲ್ಲಿ ಏಕೆ ಪ್ರತಿಭಟನೆ ನಡೆಸಿಲ್ಲ ಎಂದು ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಪ್ರಶ್ನಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ವೇದವ್ಯಾಸ ಕಾಮತ್ ಅವರ ಕುಟುಂಬಸ್ಥರು ಆಡಳಿತ ಮಂಡಳಿಯಲ್ಲಿರುವ ಕೆನರಾ ಕಾಲೇಜಿನಲ್ಲೂ ಇದೇ ನವರಾತ್ರಿ ಸಂದರ್ಭ ಪರೀಕ್ಷೆ ನಡೆದಿದ್ದರೂ, ಅಲ್ಲಿ ಎಬಿವಿಪಿ ಯಾಕೆ ಪ್ರತಿಭಟನೆ ನಡೆಸಿಲ್ಲ ಎಂದು ಪ್ರಶ್ನಿಸಿದರು.


ಗೂಂಡಾಗಿರಿ ಆರೋಪ:
ಹಬ್ಬದ ದಿನಗಳಲ್ಲಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶವಿತ್ತು. ಆದರೆ ಎಬಿವಿಪಿ ಮತ್ತು ಬಿಜೆಪಿ ನಾಯಕರು ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಗೂಂಡಾವರ್ತನೆ ತೋರಿದ್ದಾರೆ ಎಂದು ಸುಹಾನ್ ಆಳ್ವ ಆರೋಪಿಸಿದರು.
ಎನ್.ಎಸ್.ಯು.ಐ. ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
——–
ವಾಟ್ಸಪ್ ಗ್ರೂಪ್ ರಚಿಸಿ ಪ್ರಚೋದನೆ: ಯು.ಟಿ. ಫರೀದ್
ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿಂದಿನ ದಿನ ಆಗ್ನೆಸ್ ಪ್ರೊಟೆಸ್ಟ್ ಎಂಬ ವಾಟ್ಸಪ್ ಗ್ರೂಪ್ ರಚಿಸಲಾಗಿತ್ತು. ಈ ಮೂಲಕ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರಚೋದಿಸಿದ್ದಾರೆ ಎಂದು ಎನ್.ಎಸ್.ಯು.ಐ. ಉಳ್ಳಾಲ ಅಧ್ಯಕ್ಷ ಯು.ಟಿ. ಫರೀದ್ ಆರೋಪಿಸಿದರು.
ನಿರ್ದಿಷ್ಟವಾಗಿ ಸೇಂಟ್ ಆಗ್ನೆಸ್ ಕಾಲೇಜನ್ನು ಮಾತ್ರ ಟಾರ್ಗೆಟ್ ಮಾಡಿ ಗಲಾಟೆ ಸೃಷ್ಟಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದರೂ, ಕೆಲವು ಸಂಘಟನೆಗಳು ಅನಗತ್ಯವಾಗಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಅವರು ಆಕ್ಷೇಪಿಸಿದರು.








