


ಮಂಗಳೂರು: ನಗರದ ಸೈಂಟ್ ಆಗ್ನೆಸ್ ಕಾಲೇಜಿನ ಮುಂದೆ ನಡೆದ ಪ್ರತಿಭಟನೆ ಹಾಗೂ ಬೆಳವಣಿಗೆಗಳ ಹಿಂದೆ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಅವರ ಸ್ಪಷ್ಟ ಕುಮ್ಮಕ್ಕು ಇದೆ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಆರೋಪಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ನಡೆದ ಈ ಪ್ರತಿಭಟನೆಯು ಕೇವಲ ವಿದ್ಯಾರ್ಥಿಗಳ ಹೋರಾಟವಲ್ಲ, ಬದಲಿಗೆ ಅಲ್ಪಸಂಖ್ಯಾತ ವಿದ್ಯಾಸಂಸ್ಥೆಯ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ನಡೆಸಿದ ಪೂರ್ವಯೋಜಿತ ಸಂಚು ಹಾಗೂ ವ್ಯವಸ್ಥಿತ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಲು ಮಾತ್ರ ತೆರಳಿದ್ದರು ಎನ್ನುವುದಾದರೆ ಬೆಳಗ್ಗೆ 8 ಗಂಟೆಗೇ ಮಾಧ್ಯಮದವರನ್ನು ಅಲ್ಲಿಗೆ ಕರೆಸಿಕೊಂಡದ್ದೇಕೆ? ಇದು ಸಂಪೂರ್ಣ ಪೂರ್ವಯೋಜಿತ ದಾಳಿ ಎಂಬುದು ಇದರಿಂದ ಸಾಬೀತಾಗಿದೆ ಎಂದರು.
104 ವರ್ಷಗಳ ಇತಿಹಾಸವಿರುವ, ಕ್ರಿಶ್ಚಿಯನ್ ಧರ್ಮಭಗಿನಿಯರು ನಡೆಸುವ ಈ ಕಾಲೇಜು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತದೆ. ಇಲ್ಲಿ ಯಾವುದೇ ಧರ್ಮ ರಾಜಕಾರಣ ಅಥವಾ ರಾಜಕೀಯ ಪ್ರತಿಭಟನೆಗಳು ನಡೆದ ಇತಿಹಾಸವಿಲ್ಲ. ಡಿ.12ರಂದು ಅನೇಕ ಕಾಲೇಜುಗಳಲ್ಲಿ ಪರೀಕ್ಷೆ ನಡೆದಿದ್ದರೂ, ಅಲ್ಪಸಂಖ್ಯಾತ ಸಂಸ್ಥೆಯನ್ನು ಮಾತ್ರ ಯಾಕೆ ಗುರಿ ಮಾಡಲಾಯಿತು? ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಮತ್ತು ಧರ್ಮದ ಹೆಸರಿನಲ್ಲಿ ಕಂದಕ ನಿರ್ಮಿಸುವ ದುರುದ್ದೇಶದಿಂದ ಈ ಸಂಘಟಿತ ದಾಳಿ ನಡೆಸಲಾಗಿದೆ ಎಂದು ವಿನಯರಾಜ್ ಆರೋಪಿಸಿದರು.
ಈ ಪ್ರತಿಭಟನೆಯ ಹಿಂದೆ ನಿಜವಾದ ವಿದ್ಯಾರ್ಥಿಗಳು ಇದ್ದಾರಾ ಅಥವಾ ಎಬಿವಿಪಿ ಗೂಂಡಾಗಳು ಇದ್ದಾರಾ ಎಂಬುದು ತನಿಖೆಯಿಂದ ಹೊರಬರಬೇಕಿದೆ ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಅಪ್ಪಿ, ಅನಿಲ್ ಕುಮಾರ್, ಪ್ರಕಾಶ್ ಸಾಲ್ಯಾನ್, ನೀರಜ್ ಪಾಲ್, ಹೊನ್ನಯ್ಯ, ಉದಯ್ ಆಚಾರ್ ಇದ್ದರು.








