18ರಂದು ಮಂಗಳೂರಲ್ಲಿ ಕುಡ್ಲದ ಪಿಲಿಪರ್ಬ 5ನೇ ಆವೃತ್ತಿ – 11 ಹುಲಿವೇಷ ತಂಡಗಳಿಂದ ಪ್ರದರ್ಶನ, ವಿಶಾಲ ಪ್ರೇಕ್ಷಕರ ಗ್ಯಾಲರಿ: ಶಾಸಕ ಕಾಮತ್

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲು ಮಾರ್ಗದರ್ಶನದಲ್ಲಿ ಕುಡ್ಲದ ಪಿಲಿಪರ್ಬ ಐದನೇ ಆವೃತ್ತಿಯ ಸ್ಪರ್ಧಾಕೂಟ ಅ.18ರಂದು ಬೆಳಗ್ಗೆ 9.30ಕ್ಕೆ ನಗರದ ಕೇಂದ್ರ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಸರಿಯಾಗಿ ಭವ್ಯ ವಿಶಾಲ ವೇದಿಕೆಯಲ್ಲಿ ಆರಂಭಗೊಳ್ಳಲಿರುವ ಸ್ಪರ್ಧಾಕೂಟದಲ್ಲಿ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಎಂಬ ಹೆಗ್ಗಳಿಕೆ ಹೊಂದಿರುವ 11 ಹುಲಿವೇಷ ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವೂ ವೈಭವದ ಮೆರವಣಿಗೆ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿವೆ ಎಂದು ಹೇಳಿದರು.

ನಿಖರ ತೀರ್ಪು:

ಸ್ಪರ್ಧಾಕೂಟದಲ್ಲಿ 6 ತೀರ್ಪುಗಾರರು ಇರಲಿದ್ದು, ನಾಲ್ವರು ವೇದಿಕೆಯಲ್ಲಿ ಮತ್ತು ಇಬ್ಬರು ಒಳಗೆ ವಿಡಿಯೋ ವೀಕ್ಷಿಸುತ್ತಾ ಥರ್ಡ್ ಅಂಪಾಯರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹುಲಿವೇಷ ತಂಡ ವೇದಿಕೆಗೆ ಆಗಮಿಸಿ, ಪ್ರದರ್ಶನ ನೀಡಿ ನಿರ್ಗಮಿಸುವವರೆಗಿನ ಎಲ್ಲವನ್ನೂ ವಿಡಿಯೊ ದಾಖಲಿಸಿ, ಅಗತ್ಯ ಬಿದ್ದರೆ ರೀಪ್ಲೇ ವೀಕ್ಷಿಸಿ ಬಳಿಕವೇ ಫಲಿತಾಂಶ ಘೋಷಣೆ ಮಾಡಲಾಗುತ್ತದೆ.

ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ, ಧರಣಿ ಮಂಡಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಿ, ಪ್ರತಿ ಹುಲಿವೇಷ ತಂಡಕ್ಕೆ ಗೌರವ ಮೊತ್ತ ನೀಡಲಾಗುವುದು.

5 ಮಂದಿಗೆ ವೀಕ್ಷಣೆಗೆ ಗ್ಯಾಲರಿ:

ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಗೂ ನಾಡಿನ ಖ್ಯಾತನಾಮರು ಆಗಮಿಸಿ ವಿಶೇಷ ಮೆರುಗು ನೀಡಲಿದ್ದು, ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದ್ದು, ಅಲ್ಲಿಯೇ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ಸಹ ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮವು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಮುಗಿಯಲಿದೆ ಎಂದು ವೇದವ್ಯಾಸ್ ಕಾಮತ್ ಹೇಳಿದರು.

ಪ್ರದರ್ಶನ ನೀಡಲಿರುವ ತಂಡಗಳು:

ಮೊದಲನೆಯದಾಗಿ ಹನುಮಾನ್ ಟೈಗರ್ಸ್ ಉಪ್ಪಳ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಕುಂಜತ್ತೂರು ಮಂಜೇಶ್ವರ, ಕೊಡಿಯಾಲ್ ಬೈಲ್ ಫ್ರೆಂಡ್ಸ್ ಲೆಜೆಂಡ್ ಟೈಗರ್ಸ್, ಪೊಳಲಿ ದ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್, ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ, ಟ್ಯಾಲೆಂಟ್ ಟೈಗರ್ಸ್ ಎಂವೈಬಿ ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು, ಫ್ರೆಂಡ್ಸ್ ಅಂಗಾರಗುಡ್ಡೆ ಟೈಗರ್ಸ್ ಮುಲ್ಕಿ, ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ಹಾಗೂ ಅಂತಿಮವಾಗಿ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ.

ಸುದ್ದಿಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ನವನೀತ್ ಶೆಟ್ಟಿ ಕದ್ರಿ, ಕಿರಣ್ ಶೆಣೈ, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಚೇತನ್ ಕಾಮತ್ ಇದ್ದರು.

LEAVE A REPLY

Please enter your comment!
Please enter your name here