


ಮಂಗಳೂರು: ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಾನು ಕಾರಣ ಎಂದು ಶಾಸಕ ವೇದವ್ಯಾಸ ಕಾಮತ್ ಹಸಿ ಸುಳ್ಳು ಹೇಳಿದ್ದಾರೆ. ವೇದವ್ಯಾಸ ಕಾಮತ್ ತಮ್ಮ ಆರೋಪ ಸಾಬೀತುಪಡಿಸಲಿ, ಇಲ್ಲದಿದ್ದರೆ ಕ್ಷಮೆ ಕೋರಲಿ. ಇಲ್ಲವೇ ಪ್ರಮಾಣಕ್ಕೆ ಬರಲಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಸವಾಲು ಹಾಕಿದ್ದಾರೆ.





ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಬಿವಿಪಿ ಕಾರ್ಯಕರ್ತರು ಏಕಾಏಕಿ ಕಾಲೇಜಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಪರೀಕ್ಷೆ ನಡೆಯುತ್ತಿರುವ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿ ತಮ್ಮ ಪಾತ್ರ ಇಲ್ಲ. ವೇದವ್ಯಾಸ ಕಾಮತ್ ಅವರಿಗೆ ಸುಳ್ಳು ಹೇಳುವುದೇ ಕಾಯಕ ಆಗಿದೆ ಎಂದು ಟೀಕಿಸಿದರು.


ಈ ಘಟನೆಯ ಹಿನ್ನೆಲೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ಪುತ್ತೂರು ಅವರು ಕದ್ರಿ ಪೊಲೀಸ್ ಸ್ಟೇಷನ್‌ಗೆ ತೆರಳಿ ಕಾಲೇಜು ಆಡಳಿತ ವಿರುದ್ಧ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಕೇಳುವುದು ತಪ್ಪಲ್ಲವಾದರೂ, ಶಾಸಕರು ಪೊಲೀಸ್ ಸ್ಟೇಷನ್‌ನಲ್ಲಿ ಕುಳಿತು ಕಾಲೇಜು ಆಡಳಿತ ವಿರುದ್ಧ ವಿದ್ಯಾರ್ಥಿಗಳನ್ನು ಎತ್ತಿಕಟ್ಟುವುದು ಹಾಗೂ “ನೀವು ಎಕ್ಸಾಮ್ ಬರೆಯಬೇಡಿ, ನಾನಿದ್ದೇನೆ, ನಾನು ನೋಡಿಕೊಳ್ಳುತ್ತೇನೆ” ಎಂದು ಪ್ರಚೋದನೆ ನೀಡಿದ್ದು ಯಾವ ಉದ್ದೇಶಕ್ಕಾಗಿ ಎಂದು ಐವನ್ ಡಿಸೋಜ ಪ್ರಶ್ನಿಸಿದರು.
ಬಿಜೆಪಿ ನಾಯಕರು ಶಿಕ್ಷಣ ಸಂಸ್ಥೆಗಳ ಮೇಲೆ ಧರ್ಮ ಹಾಗೂ ಜಾತಿ ಆಧಾರದ ಮೇಲೆ ದಾಳಿ ಮಾಡುವುದು ಹಾಗೂ ವಿದ್ಯಾರ್ಥಿಗಳ ನಡುವೆ ವೈಮನಸ್ಸು ಹುಟ್ಟುಹಾಕುವುದು ಇದೇ ಮೊದಲಲ್ಲ. ಹಿಂದೆ ನಗರದ ಜೆರೋಸಾ ಶಾಲೆ ಮಕ್ಕಳು, ಶಿಕ್ಷಕರನ್ನು ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಕೂಗಿಸಿದ್ದನ್ನು ಜನತೆ ಮರೆತಿಲ್ಲ ಎಂದು ಐವನ್ ಡಿಸೋಜ ಹೇಳಿದರು.
ಧರ್ಮದ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸುವುದು, ಸುಳ್ಳು ಹೇಳಿಕೆಗಳನ್ನು ನೀಡುವುದು ಬಿಜೆಪಿ ಶಾಸಕರ ಚಾಳಿಯಾಗಿಬಿಟ್ಟಿದೆ. ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುವುದು ಬಿಟ್ಟು ಜವಾಬ್ದಾರಿಯುತವಾಗಿ ವರ್ತಿಸಲಿ. ಧರ್ಮಾಧಾರಿತವಾಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡೋದು ನಿಲ್ಲಿಸಲಿ ಎಂದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಸುಹಾನ್ ಆಳ್ವ, ಭಾಸ್ಕರ ರಾವ್, ಇಮ್ರಾನ್ ಎ.ಆರ್., ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್ ಮತ್ತಿತರರು ಇದ್ದರು.








