


ಮಂಗಳೂರು: ಚರ್ಚ್ ಗೆ ಪ್ರಾರ್ಥನೆಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನ ಫಾದರ್ ಸಿಪ್ರಿಯನ್ ಪಿಂಟೋ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ಅಪ್ರಾಪ್ತ ಬಾಲಕ ಪ್ರಾರ್ಥನೆಗೆ ಹೋಗುತ್ತಿದ್ದಾಗ ಆರೋಪಿ ಸಿಪ್ರಿಯನ್ ಪಿಂಟೋ ಚಾಕಲೇಟ್ ನೀಡಿ ಪುಸಲಾಯಿಸಿ, ಚರ್ಚ್‌ನ ಕೊಠಡಿಗೆ ಕರೆದೊಯ್ದು ಅನುಚಿತವಾಗಿ ವರ್ತಿಸುತ್ತಿದ್ದರು. ನಂತರದ ದಿನಗಳಲ್ಲೂ ಬಾಲಕ ಪ್ರಾರ್ಥನೆಗೆ ಹೋದಾಗಲೆಲ್ಲ ನಿರಂತರವಾಗಿ ಲೈಂಗಿಕ ಕಿರುಕುಳ ಮುಂದುವರಿದಿತ್ತು. ಆ.14ರ ಸಂಜೆ 6:30ರ ಸುಮಾರಿಗೆ ಬಾಲಕ ಪ್ರಾರ್ಥನೆಗೆ ಹೋದಾಗ, ಕೊಠಡಿಗೆ ಕರೆಯಿಸಿಕೊಂಡ ಫಾದರ್ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಲಕನು ತನ್ನ ಸ್ನೇಹಿತರ ಬಳಿ ಹೇಳಿದಾಗ ಅವರಿಗೂ ಇದೇ ರೀತಿ ಫಾ. ಸಿಪ್ರಿಯನ್ ಪಿಂಟೋ ನಿರಂತರವಾಗಿ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಭಯಭೀತನಾದ ಬಾಲಕನು ಪೋಷಕರಿಗೆ ವಿಷಯ ತಿಳಿಸಿದ್ದು, ಬಳಿಕ ಪೋಷಕರು ಬಿಷಪ್ ಬಳಿ ತೆರಳಿ ಘಟನೆಯನ್ನು ವಿವರಿಸಿದ್ದಾರೆ. ಬಿಷಪ್ ಅವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಿಳಂಬವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.









