


ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಇದೇ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗಿದ್ದು, ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೋಮವಾರ ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಅಥ್ಲೀಟ್ ಎಂ.ಆರ್. ಪೂವಮ್ಮ ಉದ್ಘಾಟಿಸಿದರು.





ಬಳಿಕ ಮಾತನಾಡಿದ ಅವರು, ತಮ್ಮ 23 ವರ್ಷಗಳ ಸುದೀರ್ಘ ಕ್ರೀಡಾ ಜೀವನದ ಅನುಭವ ಹಂಚಿಕೊಂಡರು. ನನಗೀಗ 36 ವರ್ಷ ಪ್ರಾಯ. ಕಠಿಣ ಪರಿಶ್ರಮದಿಂದ ಯಾವುದೇ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಮಹಿಳೆಯರು ಸಾಧ್ಯವಾದಷ್ಟು ಭೌತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಫಿಟ್ ಆಗಿರಲು ಸಹಾಯ ಮಾಡುತ್ತದೆ ಎಂದು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.


ಪೂವಮ್ಮ, ಅರ್ಷಿಯಾ ಖಾನ್ ಗೆ ಸನ್ಮಾನ:
ಇದೇ ಸಂದರ್ಭ ಎಂ.ಆರ್. ಪೂವಮ್ಮ ಹಾಗೂ ಯಕ್ಷ ಪ್ರತಿಭೆ ಅರ್ಷಿಯಾ ಖಾನ್ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಪೂವಮ್ಮ ಅವರಿಗೆ 25 ಸಾವಿರ ರು. ಪ್ರೋತ್ಸಾಹಧನ ನೀಡಲಾಯಿತು.
ಮಹಿಳಾ ಪ್ರತಿಭೆಗಳಿಗೆ ಪ್ರೋತ್ಸಾಹ- ಪದ್ಮರಾಜ್:
ಮಹಿಳಾ ಸಬಲೀಕರಣ ಮತ್ತು ಮಹಿಳಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬಾರಿ ಪ್ರಥಮ ಬಾರಿಗೆ ಮಹಿಳಾ ದಸರಾ ಆಯೋಜಿಸಿದ್ದೇವೆ. ಮಹಿಳೆಯರ ಪ್ರತಿಕ್ರಿಯೆ ಕೂಡ ಉತ್ತಮವಾಗಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹರ್ಷ ವ್ಯಕ್ತಪಡಿಸಿದರು.
ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಟ್ರಸ್ಟಿ ಕೃತಿನ್ ಡಿ. ಅಮೀನ್, ಗೋಕರ್ಣನಾಥ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಕುಮಾರ್, ವಕೀಲ ಪ್ರಸಾದ್ ಪಾಲನ್, ಅನು ಬೊಟೀಕ್ ನ ಅನಸೂಯಾ, ಜಯಲಕ್ಷ್ಮಿ ಸಿಲ್ಕ್ಸ್‌ವ್ಯವಸ್ಥಾಪಕ ಯಶ್ಪಾಲ್ ಮತ್ತಿತರರು ಇದ್ದರು
ಮಹಿಳಾ ದಸರಾ ಪ್ರಯುಕ್ತ ಶಾಸ್ತ್ರೀಯ ನೃತ್ಯ ಸ್ಪರ್ಧೆ, ರಂಗೋಲಿ, ಮೆಹೆಂದಿ, ಬೆಂಕಿ ರಹಿತ ಅಡುಗೆ, ಹೂ ಕಟ್ಟುವ ಸ್ಪರ್ಧೆ, ಸಮೂಹ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನೂರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.








