


ಮಂಗಳೂರು: ನಗರದ ನೆಹರು ಮೈದಾನವು ಭಾನುವಾರ ಕರಾವಳಿಯ ಜಾನಪದ ಸಂಸ್ಕೃತಿಯಾದ ಹುಲಿ ವೇಷ ಸ್ಪರ್ಧೆಯ ಜೀವಂತ ವೇದಿಕೆಯಾಗಿ ಮಾರ್ಪಟ್ಟಿತ್ತು. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆದ 5ನೇ ಆವೃತ್ತಿಯ ‘ಕುಡ್ಲದ ಪಿಲಿ ಪರ್ಬ’ ಕಾರ್ಯಕ್ರಮದಲ್ಲಿ ಹುಲಿ ವೇಷ ತಂಡಗಳು ತಮ್ಮ ಕೌಶಲ, ಕಸರತ್ತು ಪ್ರದರ್ಶಿಸುವ ಮೂಲಕ ಸಹಸ್ರಾರು ಪ್ರೇಕ್ಷಕರನ್ನು ರಂಜಿಸಿದವು.





ಸ್ಪರ್ಧೆಯಲ್ಲಿ 11 ತಂಡಗಳು ಭಾಗವಹಿಸಿದ್ದವು. ವಿಶೇಷವಾಗಿ ನಿರ್ಮಿಸಲಾದ ವೇದಿಕೆಯ ಮೇಲೆ ತಂಡಗಳಿಗೆ ತಮ್ಮ ಕೌಶಲ ಪ್ರದರ್ಶಿಸಲು ತಲಾ 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ತಂಡಗಳು ವರ್ಣರಂಜಿತ ಮೆರವಣಿಗೆಯೊಂದಿಗೆ ವೇದಿಕೆಯತ್ತ ಆಗಮಿಸಿದವು. ಪ್ರದರ್ಶನ ಆರಂಭವಾಗುತ್ತಿದ್ದಂತೆ ಹುಲಿ ವೇಷಧಾರಿಗಳು ತಾಸೆಯ ಪೆಟ್ಟಿಗೆ ಲಯಬದ್ಧವಾಗಿ ಕುಣಿಯುತ್ತಾ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.


ಹುಲಿ ವೇಷಧಾರಿಗಳ ಹಿಮ್ಮುಖ ಜಿಗಿತ, ಪಿರಮಿಡ್ ರಚನೆ ಮತ್ತು ಇತರ ಜಿಮ್ನಾಸ್ಟಿಕ್ ಸಾಹಸಗಳು ಪ್ರೇಕ್ಷಕರಿಂದ ಭಾರಿ ಕರತಾಡನ ಮತ್ತು ಹರ್ಷೋದ್ಗಾರಗಳನ್ನು ಪಡೆದುಕೊಂಡವು. ವಿಶೇಷ ಆಕರ್ಷಣೆಯಾಗಿ ‘ಅಕ್ಕಿಮುಡಿ’ ಎತ್ತುವ ಸಾಹಸ ಗಮನ ಸೆಳೆಯಿತು.
ಹುಲಿ ಕುಣಿತದ ಸಾಂಪ್ರದಾಯಿಕ ಜಾನಪದ ಗೀತೆ ‘ಧರಣಿ ಮಂಡಲ ಮಧ್ಯದೊಳಗೆ’ ಪ್ರಮುಖ ಆಕರ್ಷಣೆಯಾಗಿದ್ದರೆ, ಹಲವು ತಂಡಗಳು ತಮ್ಮ ಪ್ರದರ್ಶನಗಳಲ್ಲಿ ಜನಪ್ರಿಯ ಕನ್ನಡ ಮತ್ತು ಹಿಂದಿ ಹಾಡುಗಳನ್ನು ಕೂಡ ಅಳವಡಿಸಿಕೊಂಡಿದ್ದವು.
ಕದ್ರಿ ನವನೀತ ಶೆಟ್ಟಿ, ಕೆ.ಕೆ. ಪೇಜಾವರ, ವೆಂಕಟೇಶ್ ಭಟ್ ಮತ್ತು ರೋಹನ್ ತೊಕ್ಕೊಟ್ಟು ತೀರ್ಪುಗಾರರಾಗಿದ್ದರು. ಬಜಿಲಕೇರಿ ಕಮಲಾಕ್ಷ ಮತ್ತು ನವೀನ್ ಮಾಸ್ಟರ್ ಮೂರನೇ ಅಂಪೈರ್ಗಳಾಗಿ ಕಾರ್ಯ ನಿರ್ವಹಿಸಿದರು.
ಇದಕ್ಕೂ ಮುನ್ನ, ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ತುಳುನಾಡು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಒಂದು ವಿಶಿಷ್ಟ ನೆಲ. ಸಂಪ್ರದಾಯಗಳನ್ನು ಹೇಗೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬಹುದು ಎಂಬುದಕ್ಕೆ ತುಳುನಾಡು ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅನೇಕ ತಂಡಗಳು ಆಸಕ್ತಿ ತೋರಿದ್ದವು, ಆದರೆ ಸಮಯದ ಮಿತಿಯಿಂದಾಗಿ ಕೇವಲ 11 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ನರೇಶ್ ಪ್ರಭು, ಸಹಾನ್ ಸೇರಿದಂತೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ನಿಕಟಪೂರ್ವ ಮ.ನ.ಪಾ ಸದಸ್ಯರು ಹಾಗೂ ಅನೇಕ ಬಿಜೆಪಿ ಪ್ರಮುಖರು ಇದ್ದರು.








