ಜಗಳದ ದ್ವೇಷ: ಸ್ಕೂಟರ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರು ಯುವಕರ ಕೊಲೆ! – ಬೊಳಿಯಾರಿನಲ್ಲಿ ನಡೆದ ಕೃತ್ಯ, ತಲೆ ಮರೆಸಿಕೊಂಡ ಪಿಕಪ್ ಚಾಲಕನಿಗೆ ಶೋಧ

ಜಗಳದ ದ್ವೇಷ: ಸ್ಕೂಟರ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರು ಯುವಕರ ಕೊಲೆ!

– ಬೊಳಿಯಾರಿನಲ್ಲಿ ನಡೆದ ಕೃತ್ಯ, ತಲೆ ಮರೆಸಿಕೊಂಡ ಪಿಕಪ್ ಚಾಲಕನಿಗೆ ಶೋಧ

 

​ಮಂಗಳೂರು: ಸಣ್ಣ ಮಾತಿನ ಚಕಮಕಿ ಹಾಗೂ ಗಲಾಟೆಯ ವೈಷಮ್ಯದಿಂದ ಪಿಕಪ್ ವಾಹನದ ಚಾಲಕ ಸ್ಕೂಟರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಇಬ್ಬರು ಯುವಕರನ್ನು ಕೊಲೆ ಮಾಡಿರುವ ಭೀಕರ ಘಟನೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಳಿಯಾರಿನಲ್ಲಿ ನಡೆದಿದೆ.

​ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಉಕ್ಕುಡ ನಿವಾಸಿ ಇಸ್ಮಾಯಿಲ್ ಅವರ ಹಿರಿಯ ಮಗ ಮೊಹಮ್ಮದ್ ಝುನೈದ್ (23) ಹಾಗೂ ಆತನ ಸ್ನೇಹಿತ, ನೆರೆಮನೆಯ ಮೊಹಮ್ಮದ್ ಅಫ್ರಾಝ್ (23) ಮೃತರು.

ಜಗಳದ ದ್ವೇಷದಿಂದ ಬೆನ್ನಟ್ಟಿ ಅಪಘಾತ!:

ಅ.19ರಂದು ಮಧ್ಯಾಹ್ನ ಸುಮಾರು 1:30ಕ್ಕೆ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟಿದ್ದ ಈ ಇಬ್ಬರು ಯುವಕರು, ಸಂಜೆ 4 ಗಂಟೆಯ ಸುಮಾರಿಗೆ ರಂತಡ್ಕ ಕ್ರಾಸ್ ಬಳಿ ತಲುಪಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಪಿಕಪ್ ವಾಹನ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ಎಂಬಾತನೊಂದಿಗೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಜಗಳದ ನಂತರ ಯುವಕರು ತಮ್ಮ ಸ್ಕೂಟರ್‌ನಲ್ಲಿ ಮುಡಿಪು ಕಡೆಗೆ ತೆರಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪಿಕಪ್ ಚಾಲಕ ಹಫೀಜ್, ಯುವಕರನ್ನು ಕೊಲೆ ಮಾಡುವ ದುರುದ್ದೇಶದಿಂದ ತನ್ನ ಪಿಕಪ್ ವಾಹನದಲ್ಲಿ ವೇಗವಾಗಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಸ್ಕೂಟರ್‌ಗೆ ಪಿಕಪ್ ವಾಹನದಿಂದ ರಭಸವಾಗಿ ಡಿಕ್ಕಿ ಹೊಡೆಸಿದ್ದಾನೆ.

ಡಿಕ್ಕಿಯ ಭೀಕರತೆಗೆ ಸ್ಕೂಟರ್ ಜಖಂಗೊಂಡು ರಸ್ತೆಗೆ ಬಿದ್ದಿದ್ದು, ಬಳಿಯಿದ್ದ ವಿದ್ಯುತ್ ಕಂಬವೂ ತುಂಡಾಗಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಝುನೈದ್‌ನನ್ನು ಕಣಚೂರು ಆಸ್ಪತ್ರೆಗೂ ಹಾಗೂ ಅಫ್ರಾಝ್‌ನನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೂ ಸೇರಿಸಲಾಯಿತಾದರೂ, ತಲೆಗೆ ತೀವ್ರಪೆಟ್ಟು ಬಿದ್ದಿದ್ದರಿಂದ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೃತ್ಯ ಎಸಗಿದ ಬಳಿಕ ಆರೋಪಿ ಹಫೀಜ್ ತನ್ನ ಪಿಕಪ್ ವಾಹನವನ್ನು ಘಟನಾ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

​ಮೃತ ಝುನೈದ್ ಅವರ ತಂದೆ ಇಸ್ಮಾಯಿಲ್ (43) ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ತಿಳಿದು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here