ಜನಸಾಗರದ ನಡುವೆ ಕಂಗೊಳಿಸಿದ ಮಂಗಳೂರು ದಸರಾ ಶೋಭಾಯಾತ್ರೆ – ದೇವರ ಅದ್ಧೂರಿ ಮೆರವಣಿಗೆ ವೀಕ್ಷಿಸಲು ರಸ್ತೆಗಳ ಇಕ್ಕೆಲದಲ್ಲಿ ಭಕ್ತಸಾಗರ – ವರ್ಣರಂಜಿತ ಟ್ಯಾಬ್ಲೊಗಳು, ಆಕರ್ಷಕ ಹುಲಿಕುಣಿತದ ಅಬ್ಬರ

ಮಂಗಳೂರು: ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಮಂದಸ್ಮಿತ ನವದುರ್ಗೆಯರ ಶೋಭಾಯಾತ್ರೆ ಬುಧವಾರ ವೈಭವದಿಂದ ನೆರವೇರಿದ್ದು, ಸಹಸ್ರಾರು ಮಂದಿ ಭಕ್ತರು ಈ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಬುಧವಾರ ಸಂಜೆ ವಿವಿಧ ವೈದಿಕ, ಧಾರ್ಮಿಕ ಆಚರಣೆಯೊಂದಿಗೆ ದೇವಾಲಯದಿಂದ ಹೊರಟ ಶೋಭಾಯಾತ್ರೆಯು ವರ್ಣರಂಜಿತ ಟ್ಯಾಬ್ಲೊಗಳು, ಸಾಂಪ್ರದಾಯಿಕ ಹುಲಿ ಕುಣಿತ, ಜಾನಪದ ಕಲಾ ಪ್ರಕಾರಗಳ ಆಕರ್ಷಣೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಾಗ ಭಕ್ತ ಜನಸಾಗರದ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ದಸರಾ ಹಿನ್ನೆಲೆಯಲ್ಲಿ ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಅಲಂಕಾರಿಕ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಈ ಮೆರವಣಿಗೆಯು ನಗರದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿತು. ಶಾರದಾ ದೇವಿ, ನವದುರ್ಗೆಯರು ಮತ್ತು ಗಣಪತಿ ದೇವರ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿ ಇರಿಸಿ, ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಕೊಂಡೊಯ್ಯಲಾಯಿತು.

ದೇವಸ್ಥಾನದಿಂದ ಮೆರವಣಿಗೆ ಹೊರಟಾಗ, ಮುಖ್ಯ ಮೂರ್ತಿಗಳ ಹಿಂದೆ ಅನೇಕ ವರ್ಣರಂಜಿತ ಸ್ತಬ್ಧಚಿತ್ರಗಳು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿದವು. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮತ್ತು ಪ್ರೇಕ್ಷಕರು ದೇವಸ್ಥಾನದ ಆವರಣದಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ಜಮಾಯಿಸಿದ್ದರು.

ಪೌರಾಣಿಕ ಕಥೆಗಳನ್ನು ಬಿಂಬಿಸುವ ವಿಸ್ತೃತ ಸ್ತಬ್ಧಚಿತ್ರಗಳು ಜನಸಮೂಹವನ್ನು ಮಂತ್ರಮುಗ್ಧಗೊಳಿಸಿದವು. ಹುಲಿ ವೇಷ, ಜಾನಪದ ನೃತ್ಯಗಳು ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳು ಭಕ್ತಿ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದವು.

ಶೋಭಾಯಾತ್ರೆಯು ಕುದ್ರೋಳಿ ದೇವಾಲಯದಿಂದ ಮಣ್ಣಗುಡ್ಡೆ, ಬ್ರಹ್ಮಶ್ರೀ ನಾರಾಯಣ ಗುರು ವೃತ್ತ (ಲೇಡಿ ಹಿಲ್), ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ ಕ್ಲಾಕ್ ಟವರ್ ವೃತ್ತ, ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ ಮತ್ತು ಅಳಕೆ, ವೆಂಕಟರಮಣ ದೇವಸ್ಥಾನದ ಮಾರ್ಗವಾಗಿ ಸಾಗಿತು. ಗುರುವಾರ ಮುಂಜಾನೆ ಕುದ್ರೋಳಿ ದೇವಸ್ಥಾನಕ್ಕೆ ಮರಳಲಿದ್ದು, ಬಳಿಕ ದೇವತಾ ಮೂರ್ತಿಗಳನ್ನು ದೇವಸ್ಥಾನದ ಪುಷ್ಕರಣಿಯಲ್ಲಿ (ಕೊಳದಲ್ಲಿ) ವಿಸರ್ಜಿಸಲಾಗುತ್ತದೆ.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ, ಕುದ್ರೋಳಿ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಪ್ರಮುಖರಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ಲೀಲಾಕ್ಷ ಕರ್ಕೇರಾ, ಕಿಶೋರ್ ದಂಡೆಕೇರಿ, ವಾಸುದೇವ ಕೋಟ್ಯಾನ್, ಎಚ್.ಎಸ್. ಜೈರಾಜ್, ಲತೀಶ್ ಎಂ. ಸುವರ್ಣ,ರಾಧಾಕೃಷ್ಣ , ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್, ಗೌರವಿ ರಾಜಶೇಖರ್, ಕೃತಿನ್ ದೀರಾಜ್ ಅಮೀನ್ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here