


ಮಂಗಳೂರು: ತುಳುನಾಡಿನ ವಿಶಿಷ್ಟ ಹುಲಿಕುಣಿತ ಕಲಾ ಪ್ರಕಾರಕ್ಕೆ ವೇದಿಕೆಯನ್ನು ಕಲ್ಪಿಸಿದ್ದಲ್ಲದೆ, ದೇಶ ವಿದೇಶಗಳಿಗೆ ಕೊಂಡೊಯ್ದ ಯುವ ನಾಯಕ ಮಿಥುನ್ ಎಂ. ರೈ ನೇತೃತ್ವದ ‘ಪಿಲಿನಲಿಕೆ ಪ್ರತಿಷ್ಠಾನ’ದ 11ನೇ ಆವೃತ್ತಿಯ ‘ಪಿಲಿನಲಿಕೆ– 2026’ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.





ವೇದಿಕೆಯಲ್ಲಿ ತಾಸೆಯ ನಾದ ಹೊರಡುತ್ತಿದ್ದಂತೆ ಹುಲಿ ವೇಷಧಾರಿ ಕಲಾವಿದರ ತಂಡಗಳು ಒಂದನ್ನೊಂದು ಮೀರಿಸುವಂತೆ ಪ್ರದರ್ಶನ ನೀಡಿದ್ದು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತು. ತಾಸೆಯ ಬಡಿತ ತೀವ್ರಗೊಳ್ಳುತ್ತಿದ್ದಂತೆ, ಹುಲಿಗಳ ಕುಣಿತದ ಅಬ್ಬರ ಮುಗಿಲುಮುಟ್ಟಿತ್ತು. ಸುಮಾರು 40 ಕೆಜಿ ತೂಕದ ಅಕ್ಕಿಮುಡಿಯನ್ನು ಹಲ್ಲಿನಿಂದ ಎತ್ತಿ ಹಿಮ್ಮುಖ ಎಸೆಯುವ ಸಾಹಸ ಪ್ರೇಕ್ಷಕರ ಮೈನವಿರೇಳಿಸಿತ್ತು.


ಹಲವು ಹಂತಗಳ ಮಾನವ ಪಿರಮಿಡ್ ನಿರ್ಮಾಣ, ಬೆಂಕಿ- ಹೊಗೆಯ ನಡುವೆ ಅಕ್ರೋಬ್ಯಾಟಿಕ್ಸ್ ಇತ್ಯಾದಿ ಸಾಹಸಗಳು ಹೊಸ ದೃಶ್ಯ ಕಾವ್ಯವನ್ನೇ ಸೃಷ್ಟಿ ಮಾಡಿದ್ದವು.
9 ಪ್ರಸಿದ್ಧ ತಂಡಗಳು:
ಈ ಬಾರಿಯ ‘ಪಿಲಿನಲಿಕೆ’ಯಲ್ಲಿ ತುಳುನಾಡಿನ ಮುಂಚೂಣಿಯ 9 ಶ್ರೇಷ್ಠ ಹುಲಿ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಮಂಜೇಶ್ವರ ಕುಂಜತ್ತೂರಿನ ‘ಶಿವ ಶಕ್ತಿ ಟೈಗರ್ಸ್’ ತಂಡದಲ್ಲಿ ಕೇವಲ 7 ತಿಂಗಳ ಹಸುಗೂಸು ಪ್ರೀತಮ್ ಕೂಡ ಹುಲಿಯ ಚರ್ಮದ ಉಡುಪು ಮತ್ತು ಮುಡಿ ಧರಿಸಿ ಭಾಗವಹಿಸಿದ್ದು ಆಕರ್ಷಣೆಯಾಗಿತ್ತು.
ಪೊಳಲಿ ಟೈಗರ್ಸ್ ಚಾಂಪಿಯನ್:
ಈ ಬಾರಿಯ ಪಿಲಿನಲಿಕೆಯಲ್ಲಿ ‘ಪೊರಲ್ದ ಅಪ್ಪೆನ ಮೊಕೆದ ಬೊಲ್ಲಿಲು- ಪೊಳಲಿ ಟೈಗರ್ಸ್’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ‘ಸೋಮೇಶ್ವರ ಫ್ರೆಂಡ್ಸ್’ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡರೆ, ‘ಗೊರಕ್ಷನಾಥ ಟೈಗರ್ಸ್’ ತಂಡವು ತೃತೀಯ ಸ್ಥಾನ ಪಡೆದುಕೊಂಡಿತು. ಚಾಂಪಿಯನ್ ತಂಡಕ್ಕೆ 10 ಲಕ್ಷ ರು. ನಗದು ಬಹುಮಾನ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ 5 ಲಕ್ಷ ರು. ಮತ್ತು 3 ಲಕ್ಷ ರು. ಬಹುಮಾನ ನೀಡಲಾಯಿತು. ಜತೆಗೆ ವೈಯಕ್ತಿಕ ಬಹುಮಾನಗಳನ್ನೂ ವಿತರಿಸಲಾಯಿತು.
————-
ದಿನೇಶ್ ಕಾರ್ತಿಕ್ ಸೇರಿ ತಾರೆಯರ ದಂಡು
ಬಾಲಿವುಡ್ ನಟ ಸುನೀಲ್ ಶೆಟ್ಟಿ, ಹೆಸರಾಂತ ಕ್ರಿಕೆಟಿಗ ದಿನೇಶ್ ಕಾರ್ತಿಕ್, ನಟ ರೂಪೇಶ್ ಶೆಟ್ಟಿ, ಕುಸ್ತಿಪಟು ‘ದಿ ಗ್ರೇಟ್ ಖಲಿ’, ನಟರಾದ ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಅರ್ಜುನ್ ಕಾಪಿಕಾಡ್, ಶೈನ್ ಶೆಟ್ಟಿ ಮತ್ತಿತರ ತಾರೆಯರ ದಂಡೇ ಆಗಮಿಸಿತ್ತು. ದಿನೇಶ್ ಕಾರ್ತಿಕ್ ಮಾತನಾಡಿ, ತಾವು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಹುಲಿವೇಷ ಕುಣಿತವನ್ನು ವೀಕ್ಷಿಸುತ್ತಿರುವುದಾಗಿ ಹೇಳಿದರು. ಅವರು ತುಳು ಭಾಷೆಯಲ್ಲಿ “ಎಂಚ ಉಲ್ಲರ್, ಕುಡ್ಲ?” ಎಂದು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದು, ಸಭಿಕರಿಂದ ಭಾರಿ ಕರತಾಡನಕ್ಕೆ ಪಾತ್ರವಾಯಿತು.
————
ಹುಲಿಕುಣಿತ ಕಲೆಗೆ ವಿಶ್ವ ಮಾನ್ಯತೆ: ಮಿಥುನ್ ರೈ
ನಮ್ಮ ಮಣ್ಣಿನ ಶ್ರೇಷ್ಠ ಪರಂಪರೆ ಮತ್ತು ತುಳುನಾಡಿನ ಹೆಮ್ಮೆಯ ಕಲೆಯಾಗಿರುವ ಪಿಲಿನಲಿಕೆಗೆ ಕೇವಲ ರಸ್ತೆಗಳಲ್ಲಿ ಮಾತ್ರವಲ್ಲದೆ, ಕ್ರೀಡೆಯ ರೀತಿಲ್ಲಿ ಶಿಸ್ತುಬದ್ಧ ಸ್ಪರ್ಧಾತ್ಮಕ ಗೌರವ ದಕ್ಕಬೇಕು ಎಂಬ ಉದ್ದೇಶದಿಂದ 11 ವರ್ಷಗಳ ಹಿಂದೆ ಈ ಅಭಿಯಾನವನ್ನು ಆರಂಭಿಸಿದೆವು. ಇಂದು ನಮ್ಮ ಹುಲಿ ವೇಷಧಾರಿಗಳಿಗೆ ಯೋಗ್ಯ ಸಂಭಾವನೆ, ವಿಮೆ ಹಾಗೂ ವಿಶ್ವ ಮಟ್ಟದ ಮಾನ್ಯತೆ ಸಿಗುವಂತಾಗಿದೆ. ಈ ಕಲೆ ಕೇವಲ ಮನರಂಜನೆಯಲ್ಲ, ನಮ್ಮ ರಕ್ತದಲ್ಲೇ ಹರಿಯುತ್ತಿರುವ ಭಕ್ತಿ ಮತ್ತು ಸಂಸ್ಕೃತಿಯ ಪ್ರತೀಕ. ಮುಂದಿನ ಪೀಳಿಗೆಗೂ ಈ ಪಾರಂಪರಿಕ ಕಲೆಯನ್ನು ಅಷ್ಟೇ ಜೀವಂತವಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಹೇಳಿದರು.
————








