ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ವೈದ್ಯಕೀಯ ಸೇವೆ: ಗಣೇಶ್ ರಾವ್ – ಜಿ.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮತ್ತು ಉನ್ನತ ಮಟ್ಟದ ಸೌಲಭ್ಯಗಳನ್ನು ಒದಗಿಸಿ ವೈದ್ಯಕೀಯ ಸೇವೆ ಸಲ್ಲಿಸುವುದು ನಮ್ಮ ವೈದ್ಯಕೀಯ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಜಿ.ಆರ್. ಮೆಡಿಕಲ್ ಕಾಲೇಜು, ಆಸ್ಪತ್ರೆಯ ಅಧ್ಯಕ್ಷರಾದ ಗಣೇಶ್ ರಾವ್ ಹೇಳಿದ್ದಾರೆ.

ಜಿ.ಆರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಡ ಅಸ್ವಸ್ಥರಿಗೆ ಉಚಿತ ಅಂಬುಲೆನ್ಸ್ ಸಾರಿಗೆ ವ್ಯವಸ್ಥೆಯನ್ನು ಕೂಡ ಸಂಸ್ಥೆಯ ವತಿಯಿಂದ ಒದಗಿಸಲಾಗುವುದು. ಅಲ್ಲದೆ, ಈ ಉಚಿತ ವೈದ್ಯಕೀಯ ಶಿಬಿರವನ್ನು ಪ್ರತಿ ತಿಂಗಳಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಶೆಟ್ಟಿ ಮಾತನಾಡಿ, ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜನಸಾಮಾನ್ಯರ ಆರೋಗ್ಯ ರಕ್ಷಣೆ ನಮ್ಮ ಗುರಿ. ಆಸ್ಪತ್ರೆಯಲ್ಲಿ ೭೨೦ ಹಾಸಿಗೆಗಳಿದ್ದು ೧೯೦ ವೈದ್ಯಕೀಯ ತಜ್ಞರು ಹಗಲಿರುಳು ೨೪ ಗಂಟೆಗಳ ತುರ್ತು ವೈದ್ಯಕೀಯ ಸೇವೆ ನೀಡಲಿದ್ದಾರೆ ಎಂದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ಅವರು ಶಿಬಿರಕ್ಕೆ ಯಶಸ್ಸು ಕೋರಿದರು.

ನುರಿತ ವೈದ್ಯರಾದ ಡಾ.ಈರಪ್ಪ (ವೈದ್ಯಕೀಯ ಶಾಸ್ತ್ರತಜ್ಞರು), ಡಾ. ಕಿಶೋರಿ (ಪ್ರಸೂತಿ ಮತ್ತು ಸ್ತ್ರೀ ಆರೋಗ್ಯ ತಜ್ಞರು), ಕೀಲು ಮತ್ತು ಮೂಳೆಶಾಸ್ತ್ರ ತಜ್ಞ ಡಾ. ವಿಶಾಲ್, ನರರೋಗ ಶಾಸ್ತ್ರ ತಜ್ಞ ಡಾ.ರವಿತೇಜ, ಪ್ರಯೋಗಾಲಯ ಮುಖ್ಯಸ್ಥೆ ಡಾ. ಸುಚೇತಾ ಶೆಟ್ಟಿ ಶಿಬಿರದಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಸುಧಾಕರ್, ರೋಟರಿ ಸಂಸ್ಥೆಯ ವಲಯಾಧಿಕಾರಿ ರಾಜೇಶ್ ಶೆಟ್ಟಿ ಇದ್ದರು. ಶಿಬಿರದ ಸಂಘಟಕ ಡಾ. ದೇವದಾಸ್ ರೈ ಸ್ವಾಗತಿಸಿ, ನಿರೂಪಿಸಿದರು. ಡಾ. ಜೂಲಿಯನ್ ಸಲ್ಡಾನ್ಹಾ ವಂದಿಸಿದರು. ಈ ಶಿಬಿರದಲ್ಲಿ ಸುಮಾರು ೨೫೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here