ದ.ಕ.ದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ 9,064 ಮಂದಿ ಔಟ್ – ಜಿಲ್ಲೆಯಲ್ಲೀಗ ಒಟ್ಟು 16,78,448 ಮತದಾರರು – ಅರ್ಹ ಮತದಾರರನ್ನು ಕೈಬಿಟ್ಟಿಲ್ಲ, ಆಕ್ಷೇಪಣೆಗಳನ್ನು ಮಾನ್ಯ ಮಾಡಿಲ್ಲ: ಜಿಲ್ಲಾಧಿಕಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಪರಿಷ್ಕರಣೆಯ ಅವಧಿಯಲ್ಲಿ ಜಿಲ್ಲಾದ್ಯಂತ ಪರಿಶೀಲನೆ ನಡೆಸಿ ಒಟ್ಟು 9,064 ಮಂದಿಯ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾದ 9,064 ವ್ಯಕ್ತಿಗಳ ಪೈಕಿ ಮೃತಪಟ್ಟವರು 87 ಮಂದಿ, ಶಾಶ್ವತವಾಗಿ ಸ್ಥಳಾಂತರಗೊಂಡವರು 7,627 ಮಂದಿ, ಈಗಾಗಲೇ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾದ 6 ಮಂದಿ ಹಾಗೂ ವಿಚಾರಣೆಯ ವೇಳೆ ಅನರ್ಹರೆಂದು ಗುರುತಿಸಲ್ಪಟ್ಟ 1,384 ಮಂದಿ ಸೇರಿದ್ದಾರೆ ಎಂದು ಹೇಳಿದರು.

16,78,448 ಮತದಾರರು:

ಅಂತಿಮ ಮತದಾರರ ಪಟ್ಟಿಯ ಪ್ರಕಾರ ದ.ಕ. ಜಿಲ್ಲೆಯಲ್ಲಿ ಒಟ್ಟು 16,78,448 ಮತದಾರರಿದ್ದಾರೆ. ಇವರಲ್ಲಿ 8,23,198 ಪುರುಷರು, 8,55,232 ಮಹಿಳೆಯರು ಮತ್ತು 18 ತೃತೀಯ ಲಿಂಗಿ ಮತದಾರರಿದ್ದಾರೆ.

41,125 ಹೊಸ ಮತದಾರರ ಸೇರ್ಪಡೆ:

ಆ.24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 16,46,387 ಮತದಾರರಿದ್ದರು. ಕರಡು ಪಟ್ಟಿ ಪ್ರಕಟವಾದ ನಂತರ ಒಟ್ಟು 41,125 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ನಮೂನೆ-6 ಸಲ್ಲಿಸಿದ 32,986 ಮಂದಿ, ನಮೂನೆ-6ಎ ಸಲ್ಲಿಸಿದ 357 ಮಂದಿ ಹಾಗೂ ಸ್ಥಳಾಂತರಕ್ಕಾಗಿ ನಮೂನೆ-8 ಸಲ್ಲಿಸಿದ 7,782 ಮಂದಿ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ನೋಟಿಸ್ ಜಾರಿಗೊಳಿಸಿದ್ದು ದ.ಕ.ದಲ್ಲೇ ಹೆಚ್ಚು:

ಎಸ್‌ಐಆರ್ ಪ್ರಕ್ರಿಯೆ ಸಂದರ್ಭ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಒಟ್ಟು 1,50,131 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ರಾಜ್ಯದಲ್ಲಿ ಇಷ್ಟು ಸಂಖ್ಯೆಯಲ್ಲಿ ನೋಟಿಸ್ ಜಾರಿಗೊಳಿಸಿದ್ದು ದ.ಕ.ದಲ್ಲೇ ಅತಿ ಹೆಚ್ಚು. ಮತದಾರರ ವಿಚಾರಣೆಯ ನಂತರ, 1,48,739 ಮಂದಿಯನ್ನು ಅಂತಿಮ ಪಟ್ಟಿಗೆ ಅರ್ಹರೆಂದು ಪರಿಗಣಿಸಲಾಯಿತು ಮತ್ತು 1,392 ಮಂದಿಯನ್ನು ಅನರ್ಹರೆಂದು ಪರಿಗಣಿಸಲಾಯಿತು. ಅನರ್ಹರೆಂದು ಪರಿಗಣಿಸಲ್ಪಟ್ಟವರಲ್ಲಿ ಮೃತಪಟ್ಟ 274 ಮಂದಿ, ಎರಡು ಕಡೆ ಹೆಸರು ನೋಂದಾಯಿಸಿಕೊಂಡಿದ್ದ 760 ಮಂದಿ, ಸ್ಥಳಾಂತರಗೊಂಡ 318 ಮಂದಿ ಮತ್ತು ಇತರ ದೇಶಗಳ ಪೌರತ್ವ ಹೊಂದಿರುವ 40 ಮಂದಿ ಸೇರಿದ್ದಾರೆ ಎಂದರು.

25,326 ಯುವ ಮತದಾರರು:

ಅಂತಿಮ ಮತದಾರರ ಪಟ್ಟಿಯಲ್ಲಿ 18ರಿಂದ 19 ವರ್ಷ ವಯೋಮಾನದ 25,326 ಯುವ ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಈ ಸಂಖ್ಯೆ 12,418 ಆಗಿತ್ತು. ಅಲ್ಲದೆ, ಅಂತಿಮ ಪಟ್ಟಿಯಲ್ಲಿ 13,420 ವಿಶೇಷಚೇತನ ಮತದಾರರಿದ್ದು, ಇವರಲ್ಲಿ 7,607 ಪುರುಷರು ಮತ್ತು 5,813 ಮಹಿಳೆಯರಿದ್ದಾರೆ. ಅಂತಿಮ ಪಟ್ಟಿಯಲ್ಲಿ 85 ವರ್ಷ ಮೇಲ್ಪಟ್ಟ 14,086 ಮತದಾರರಿದ್ದು, ಇದರಲ್ಲಿ 8,707 ಮಹಿಳಾ ಮತದಾರರು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಒಟ್ಟು 366 ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ‘ನಮೂನೆ 6ಎ’ ಸಲ್ಲಿಸಿದ್ದರು. ಅಲ್ಲದೆ, ಜಿಲ್ಲೆಯಲ್ಲಿ 449 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ರಾಜು ಕೆ. ಇದ್ದರು.

ಅರ್ಹ ಮತದಾರರನ್ನು ಕೈಬಿಟ್ಟಿಲ್ಲ: ಜಿಲ್ಲಾಧಿಕಾರಿ

ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ನೀಡಲಾದ ನಮೂನೆ-7 ಅಥವಾ ಇತರ ಆಕ್ಷೇಪಣೆಗಳು ಮಾನ್ಯವಾಗಿಲ್ಲ. ದಾಖಲೆ ರಹಿತ ಆಕ್ಷೇಪಣೆಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಹೆಸರುಗಳನ್ನು ತೆಗೆದುಹಾಕುವಂತೆ ಜಿಲ್ಲೆಯಲ್ಲಿ ಒಟ್ಟು 1,205 ಮನವಿ ಸಲ್ಲಿಕೆಯಾಗಿತ್ತು. ಇದರಲ್ಲಿ ನಮೂನೆ-7ರ ಮೂಲಕ 879 ಮನವಿಗಳು ಬಂದಿದ್ದರೆ, ಉಳಿದ 326 ಆಕ್ಷೇಪಣೆಗಳನ್ನು ಸರಿಯಾದ ವಿಳಾಸ ಅಥವಾ ಹೆಸರುಗಳಿಲ್ಲದೆ ಸಲ್ಲಿಸಲಾಗಿತ್ತು. ಇದರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಪರಿಗಣಿಸುವಂತಹ ಯಾವುದೇ ಮಾನ್ಯ ಆಕ್ಷೇಪಣೆಗಳು ಇರಲಿಲ್ಲ. ರಾಜಕೀಯ ಪಕ್ಷಗಳ ಲೆಟರ್‌ಹೆಡ್‌ಗಳಲ್ಲಿ ಸಲ್ಲಿಸಲಾದ ಆಕ್ಷೇಪಣೆಗಳನ್ನು ಮಾನ್ಯ ಮಾಡಿಲ್ಲ. ಆದ್ದರಿಂದ, ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು

ಬೇರೆ ದೇಶಗಳ ಪೌರತ್ವ ಪಡೆದ 40 ಮಂದಿ ಹೆಸರು ರದ್ದು

ದಾಖಲೆಗಳ ಪರಿಶೀಲನೆಯ ವೇಳೆ ಇತರ ದೇಶಗಳ ಪೌರತ್ವ ಹೊಂದಿರುವ 40 ವ್ಯಕ್ತಿಗಳನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಇವರಲ್ಲಿ ನೇಪಾಳದ 17 ಮಂದಿ, ಯುಕೆ 2, ಕೆನಡಾ 5, ಆಸ್ಟ್ರೇಲಿಯಾ ಮತ್ತು ಅಮೆರಿಕದ ತಲಾ 6 ಮಂದಿ ಹಾಗೂ ನೆದರ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನಾರ್ವೆಯ ತಲಾ ಒಬ್ಬರು ಸೇರಿದ್ದಾರೆ. ಈ ವ್ಯಕ್ತಿಗಳು ಮೂಲತಃ ಭಾರತೀಯರಾಗಿದ್ದು, ಕಾಲಕ್ರಮೇಣ ಇತರ ದೇಶಗಳ ಪೌರತ್ವ ಪಡೆದುಕೊಂಡಿದ್ದರು. ಆದರೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಹಾಗೆಯೇ ಉಳಿದುಕೊಂಡಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದ.ಕ.ದ ಒಟ್ಟು ಮತದಾರರು- 16,78,448

ಪುರುಷರು- 8,23,198

ಮಹಿಳೆಯರು- 8,55,232

ತೃತೀಯ ಲಿಂಗಿ- 18

ತಾಲೂಕುವಾರು ಮತದಾರರ ಸಂಖ್ಯೆ

ಬೆಳ್ತಂಗಡಿ- 2,22,254

ಮೂಡುಬಿದಿರೆ- 1,97,712

ಮಂಗಳೂರು ನಗರ ಉತ್ತರ- 2,27,530

ಮಂಗಳೂರು ನಗರ ದಕ್ಷಿಣ – 2,12,512

ಮಂಗಳೂರು- 1,98,956

ಬಂಟ್ವಾಳ- 2,15,710

ಪುತ್ತೂರು- 2,04,181

ಸುಳ್ಯ- 1,99,593

LEAVE A REPLY

Please enter your comment!
Please enter your name here