


ಮಂಗಳೂರು: ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ, ಸ್ವಾತಂತ್ರ‍್ಯ ಸಂಗ್ರಾಮದ ಕಿಚ್ಚನ್ನು ಬಡಿದೆಬ್ಬಿಸಿದ ವಂದೇಮಾತರಂ ಗೀತೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಜೈಲಿಗೆ ಹೋದರೂ ಪರವಾಗಿಲ್ಲ, ಗೀತೆಯ ಎರಡು ಸಾಲು ಬಿಟ್ಟು ಮಿಕ್ಕಿದ್ದನ್ನು ಹಾಡುವುದಿಲ್ಲ ಎಂದು ಹೇಳುತ್ತಿರುವ ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.


ವಂದೇ ಮಾತರಂನ ಪ್ರತಿ ಶಬ್ದದಲ್ಲಿ ತಾಯಿ ಭಾರತಿಯ ಗುಣಗಾನವಿದೆ. ನಮ್ಮ ಸಂಸ್ಕೃತಿ, ಪರಂಪರೆ, ಸಮೃದ್ಧ ಪ್ರಕೃತಿ, ಭಾಷಾವೈವಿಧ್ಯತೆಗಳ ಸೊಬಗಿದೆ. ಆದರೆ ಈ ದೇಶದ ಸ್ವಾತಂತ್ರ‍್ಯಕ್ಕಾಗಿ ನಾವೇ ಹೋರಾಟ ಮಾಡಿರುವುದು ಎಂದು ಬೊಗಳೆ ಬಿಡುವ ಕಾಂಗ್ರೆಸಿಗರು, ಲಕ್ಷಾಂತರ ಭಾರತೀಯರಿಗೆ ಬ್ರಿಟಿಷರ ವಿರುದ್ಧ ಸೆಣಸಾಡಲು ಸ್ಫೂರ್ತಿಯಾಗಿದ್ದ ವಂದೇಮಾತರಂ ಗೀತೆ ಕೇಳುವಾಗ, ಇರುವೆ ಕಚ್ಚಿಸಿಕೊಂಡವರಂತೆ ಉರಿವುದನ್ನು ನೋಡಿದರೆ ಇವರ ವಿಕಾರ ಮನೋಭಾವನೆಯನ್ನು ಮತ್ತು ತುಷ್ಠೀಕರಣದ ಪರಮಾವಧಿಯನ್ನು ಬಿಂಬಿಸುತ್ತದೆ. ಸ್ವಾತಂತ್ರ‍್ಯ ಪೂರ್ವದಿಂದ ಇಂದಿನವರೆಗೂ ವಂದೇಮಾತರಂನ್ನು ವಿರೋಧಿಸುವ ಕಾಂಗ್ರೆಸ್ ಗೆ ದೇಶದ ಜನರು ಕ್ವಿಟ್ ಇಂಡಿಯಾ ಹೇಳಬೇಕಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ಹೇಳಿದ್ದಾರೆ.










