21ರಂದು ಮಂಗಳೂರಲ್ಲಿ ಮೆಗಾ ಎಂಎಸ್ಎಂಇ & ಸ್ಟಾರ್ಟ್‌ಅಪ್ ಕಾನ್ ಕ್ಲೇವ್ – ಮಂಗಳೂರಿನ ರೆಡ್ ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆ ಮೆಗಾ ಕಾನ್ ಕ್ಲೇವ್ – 400ಕ್ಕೂ ಅಧಿಕ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು ಭಾಗಿ, ಮಾದರಿ ಎಂಎಸ್ಎಂಇಗಳಿಗೆ ಪ್ರಶಸ್ತಿ ಪ್ರದಾನ

ಮಂಗಳೂರು: ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಸುದ್ದಿ ಅರಿವು ಕೇಂದ್ರ ಜಂಟಿ ಆಶ್ರಯದಲ್ಲಿ ಒಂದು ದಿನದ ಮೆಗಾ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಕಾನ್ ಕ್ಲೇವ್, ಆ.21ರಂದು ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆಯ ತಾಜ್ ವಿವಾಂತ ಹೊಟೇಲ್ ಎದುರಿನ ರೆಡ್ ಕ್ರಾಸ್ ಪ್ರೇರಣಾ ಸಭಾಗಣದಲ್ಲಿ ನಡೆಯಲಿದೆ.

 

ಕಾನ್ ಕ್ಲೇವ್ ನಿರ್ದೇಶಕ ಹಾಗೂ ಕರಾವಳಿ ಕರ್ನಾಟಕದ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್, ಎಂಎಸ್ಎಂಇ ಹಾಗೂ ಸ್ಟಾರ್ಟ್ ಅಪ್ ಮಾರ್ಗದರ್ಶಕ ಸಿಎ ಎಸ್.ಎಸ್. ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಅಂದು ಬೆಳಗ್ಗೆ 9.15ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಾಯೋಜಕ ಬ್ಯಾಂಕ್‌ಗಳು ಮತ್ತು ಎಂ.ಆರ್.ಪಿ.ಎಲ್.ನ ಗಣ್ಯರು ಉಪಸ್ಥಿತರಿರುತ್ತಾರೆ. ದೇಶಾದ್ಯಂತದಿಂದ ಆಗಮಿಸುವ ಖ್ಯಾತ ತಜ್ಞರಿಂದ ಎಂಎಸ್ಎಂಇ, ಸ್ಟಾರ್ಟ್ ಅಪ್, ಸಿಬಿಲ್ ಸ್ಕೋರ್ ಇಶ್ಯೂಸ್, ಸರ್ಕಾರಗಳ ಸಬ್ಸಿಡಿ, ವಿವಿಧ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ, ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಆಹಾರ ಸಂಸ್ಕರಣೆ ವಲಯಗಳಲ್ಲಿ ವಿಶೇಷ ಅಧಿವೇಶನಗಳು ನಡೆಯಲಿವೆ ಎಂದು ತಿಳಿಸಿದರು.

ಮಾದರಿ ಎಂಎಸ್ಎಂಇಗಳಿಗೆ ಪ್ರಶಸ್ತಿ:

ಸಂಜೆ ವರ್ಣರಂಜಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸಮ್ಮುಖದಲ್ಲಿ ಮಾದರಿ ಎಂಎಸ್ಎಂಇ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕಿ ಬಿಜಿ ಎಸ್.ಎಸ್., ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ ಎಂದು ಎಸ್.ಎಸ್. ನಾಯಕ್ ಹೇಳಿದರು.

400ಕ್ಕೂ ಅಧಿಕ ಉದ್ಯಮಿಗಳು, ಸ್ಟಾರ್ಟ್ಅಪ್ಸ್ ಭಾಗಿ:

ಕರಾವಳಿ ಕರ್ನಾಟಕದ ಅನೇಕ ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಅನೇಕ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಮತ್ತು ಮರೆಯಲಾಗದ ಕೊಡುಗೆಗಳನ್ನು ನೀಡಿದ್ದಾರೆ. ಈ ಸಮಾವೇಶದಲ್ಲಿ 400ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ತಂತ್ರಜ್ಞಾನ ವಲಯ, ವ್ಯಾಪಾರ, ಇ-ವಾಣಿಜ್ಯ, ಪ್ರವಾಸೋದ್ಯಮ, ಉತ್ಪಾದನೆ, ಸೇವೆಗಳು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಎಂಎಸ್ಎಂಇಗಳು ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ಕರಾವಳಿ ಪ್ರದೇಶದ ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು, ಬ್ಯಾಂಕುಗಳು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಟ್ಟುಗೂಡಿಸುವುದು ಸಮಾವೇಶದ ಉದ್ದೇಶವಾಗಿದೆ ಎಂದವರು ವಿವರಿಸಿದರು.

ಬ್ಯಾಂಕಿಂಗ್ ಬೆಂಬಲ:

ಎಂಎಸ್ಎಂಇ ವ್ಯವಸ್ಥೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಬೆಂಬಲ ಕೂಡ ಇದೆ. ವಿಶೇಷವಾಗಿ ಈ ಸಮಾವೇಶದಲ್ಲಿ ಕರ್ನಾಟಕ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಸ್ಐಡಿಬಿಐ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಎಸ್.ಬಿ.ಐ, ಪಂಜಾಬ್ & ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಎಂಸಿಸಿ ಬ್ಯಾಂಕ್‌ಗಳ ಸಕ್ರಿಯ ಪ್ರಾಯೋಜಕತ್ವ ಮತ್ತು ಭಾಗವಹಿಸುವಿಕೆಯೊಂದಿಗೆ ಈ ಕಾನ್ ಕ್ಲೇವ್ ನೆರವೇರಲಿದೆ.

ಕರಾವಳಿ ಕರ್ನಾಟಕದ ಮಿನಿ ರತ್ನ ಕಂಪೆನಿ ಎಂ.ಆರ್.ಪಿ.ಎಲ್. ಸಹ ಮುಖ್ಯ ಪ್ರಾಯೋಜಕತ್ವ ವಹಿಸಿದೆ. ಎಸ್.ಕೆ.ಎಫ್. ಎಲಿಕ್ಸರ್, ರೈನ್ ಲ್ಯಾಂಡ್ ಇಸುಜು, ಕೆನರಾ ರೊಬೆಕೊ ಮ್ಯೂಚುಯಲ್ ಫಂಡ್ ಮತ್ತು ಕ್ಯಾಂಪ್ಕೋ, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗಳು ಪೋಷಕ ಪ್ರಾಯೋಜಕರಾಗಿದ್ದಾರೆ ಎಂದು ಎಸ್.ಎಸ್. ನಾಯಕ್ ತಿಳಿಸಿದರು.

ಇದು ಪ್ರಮುಖ ಎಂಎಸ್ಎಂಇ ಮತ್ತು ಸ್ಟಾರ್ಟ್‌ಅಪ್ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ನೋಂದಣಿಯೊಂದಿಗೆ ಭಾಗವಹಿಸಲು ಅವರು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಕಾರ್ಯದರ್ಶಿ ಡಾ.ಪಿ.ಜಿ. ಮಹೇಶ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ.ಎನ್., ಕಾರ್ಯದರ್ಶಿ ಜಾಕ್ಸನ್ ಸಲ್ಡಾನ, ಕಾರ್ಯಕ್ರಮ ಸಂಯೋಜಕ ಡ್ಯಾರಿಲ್ ಡಿಸೋಜ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಡಾ.ದೇವದಾಸ್ ರೈ, ಪಿಎಂಎಫ್ಎಂಇ ಮಂಗಳೂರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಇದ್ದರು.

 

LEAVE A REPLY

Please enter your comment!
Please enter your name here