ಆಳ್ವಾಸ್ ಪ್ರಗತಿ: 2,416 ಅಭ್ಯರ್ಥಿಗಳಿಗೆ ಸ್ಪಾಟ್‌ಆಫರ್, 6,183 ಮಂದಿ ಶಾರ್ಟ್‌ಲಿಸ್ಟ್ – ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಸಮಗ್ರ ಮಾಹಿತಿ

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2026’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಎರಡು ದಿನಗಳ ಕಾಲ ನಡೆದ ಮೇಳದಲ್ಲಿ 2,416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್‌ ದೊರೆತಿದ್ದು, 6,183 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳದಲ್ಲಿ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಹಿನ್ನೆಲೆಯ 332 ಕಂಪೆನಿಗಳು ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಮೇಳದಲ್ಲಿ ಭಾಗವಹಿಸಿದ್ದ 301 ಕಂಪೆನಿಗಳ ಫಲಿತಾಂಶಗಳನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ (www.alvaspragati.com) ಪ್ರಕಟಿಸಲಾಗಿದೆ. ಸಂದರ್ಶನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ತಮ್ಮ ಆಯ್ಕೆ ಅಥವಾ ಶಾರ್ಟ್‌ಲಿಸ್ಟ್‌ ಕುರಿತು ಈ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಉಳಿದ ಕಂಪೆನಿಗಳ ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ನೇಮಕಾತಿ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು. ಉದ್ಯೋಗ ಮೇಳದಂದು ಸ್ಥಳದಲ್ಲೇ ನೋಂದಣಿ ಮಾಡಿದಂತಹ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಅವರಿಗೆ ಆಳ್ವಾಸ್ ತಂಡದಿಂದ ದೂರವಾಣಿ ಕರೆ ಹಾಗೂ ಎಸ್‌ಎಂಎಸ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ನೇಮಕಾತಿ:

ಉತ್ಪಾದನಾ ವಲಯವು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಕೊಡುಗೆ ನೀಡಿದ್ದು, 75 ಕಂಪೆನಿಗಳು ಭಾಗವಹಿಸಿ, 924 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, 523 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರಲ್ಲಿ ಬಹುತೇಕರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಎಚ್‌ಎಲ್ ಮಾಂಡೊ ಸಂಸ್ಥೆಯು ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗಗಳ 99 ಎಂಜಿನಿಯರಿಂಗ್‌ ಪದವೀಧರರನ್ನು ಚೆನ್ನೈಯಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿದ್ದು, ವಾರ್ಷಿಕ ₹ 3.4 ಲಕ್ಷ ವೇತನ ಪ್ಯಾಕೇಜ್ ನೀಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಚಾರ್ಟರ್ಡ್ ಅಕೌಂಟೆಂಟ್‌ ಅಭ್ಯರ್ಥಿಯೊಬ್ಬರನ್ನು ವಾರ್ಷಿಕ ₹11 ಲಕ್ಷ ಪ್ಯಾಕೇಜ್‌ಗೆ ಶಾರ್ಟ್‌ಲಿಸ್ಟ್ ಮಾಡಿದೆ. ಎಕ್ಸಿಕಾಮ್‌ಟೆಲಿ- ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯು 30 ಮಹಿಳಾ ಅಭ್ಯರ್ಥಿಗಳನ್ನು ವಾರ್ಷಿಕ 3 ಲಕ್ಷ ರು. ಪ್ಯಾಕೇಜ್‌ಗೆಆಯ್ಕೆ ಮಾಡಿದೆ ಎಂದು ವಿವೇಕ್ ಆಳ್ವ ಮಾಹಿತಿ ನೀಡಿದರು.

ಐಟಿ ಮತ್ತು ಐಟಿ ಇಎಸ್‌ ಕ್ಷೇತ್ರದಲ್ಲಿ 34 ಕಂಪೆನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ, 96 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್‌ ದೊರೆತಿದೆ. ವುಡ್‌ರಾಕ್‌ ಇನ್ಫೋಟೆಕ್ ಕಂಪೆನಿಯು 17 ಜನರನ್ನು ಶಾರ್ಟ್‌ಲಿಸ್ಟ್‌ಗೊಳಿಸಿದ್ದು, ಆ ಅಭ್ಯರ್ಥಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಪ್ರೋಟಾಕ್ ಸೊಲ್ಯೂಷನ್ಸ್‌ ಚೆನ್ನೈಯಲ್ಲಿ ಉದ್ಯೋಗಕ್ಕಾಗಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋದಲ್ಲಿ, ಅಂತಾರಾಷ್ಟ್ರೀಯ ಉದ್ಯೋಗಾವಕಾಶವೊಂದನ್ನು ಓರ್ವ ಅಭ್ಯರ್ಥಿಗೆ ಒದಗಿಸಿದೆ ಎಂದರು.

ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲಿ 913 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಗೊಳಿಸಿದ್ದು, 211 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೀಡಿದೆ. ಪ್ರಮುಖ ಬಹುರಾಷ್ಟ್ರೀಯ ಕಂಪೆನಿಯಾದ ಇ.ಎಕ್ಸ್.ಎಲ್. ಸರ್ವಿಸಸ್ ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತು ಅಕೌಂಟ್ಸ್ ಪೇಯಬಲ್ ವಿಭಾಗಗಳಲ್ಲಿ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.

ಔಷಧೀಯ ಕ್ಷೇತ್ರದಲ್ಲಿ ಯೂರೋಫಿನ್ಸ್, ಆ‌ರ್.ಎಲ್‌. ಫೈನ್‌ಕೆಮ್, ಸೋಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮೆಡಾರ್ಗ್ಯಾನಿಕ್ಸ್‌ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್, ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ಹಲವು ಸಂಸ್ಥೆಗಳು 159 ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್ ಮಾಡಿದ್ದು, 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ.

ಆರೋಗ್ಯ ಕ್ಷೇತ್ರದಲ್ಲೂ ಉತ್ತಮ ನೇಮಕಾತಿ ನಡೆದಿದ್ದು, ಮುಂಬೈನ ಬೆಥನಿ ಆಸ್ಪತ್ರೆಯು 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೀನಿಕ್ ಸಮಿಟ್‌ ರೆಸಾರ್ಟ್ ಸಂಸ್ಥೆಯು ಪ್ರಕೃತಿ ಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್‌ನೆಸ್‌ ಥೆರಪಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ ಎಂದು ವಿವೇಕ್ ಆಳ್ವ ತಿಳಿಸಿದರು.

ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳು:

ಆಳ್ವಾಸ್ ಪ್ರಗತಿ-2026 ಮೂಲಕ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳಿಗೂ ವೇದಿಕೆ ಕಲ್ಪಿಸಲಾಗಿದೆ. ಜಿಬಿಎಂಟಿ ಸ್ಟ್ರಕ್ಟರಲ್ ಸ್ಟೀಲ್ ಮ್ಯಾನುಫ್ಯಾಕ್ಟರಿಂಗ್ ಇಂಡಸ್ಟ್ರೀಸ್ ಸಂಸ್ಥೆಯು ಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದ 9 ಅಭ್ಯರ್ಥಿಗಳನ್ನು ಯುಎಇಯಲ್ಲಿನ ಉದ್ಯೋಗಾವಕಾಶಗಳಿಗೆ ಆಯ್ಕೆ ಮಾಡಿದ್ದು, ವಾರ್ಷಿಕ ₹ 6 ಲಕ್ಷ ಪ್ಯಾಕೇಜ್ ನೀಡಿದೆ. ಎಕ್ಸ್‌ಪರ್ಟೈಸ್‌ ಕಾಂಟ್ರಾಕ್ಟಿಂಗ್ ಸಂಸ್ಥೆಯು 117 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸೌದಿ ಅರೇಬಿಯಾ ಹಾಗೂ ಗುಜರಾತ್‌ನ ಅದಾನಿ ಮುಂದ್ರಾದ ಯೋಜನೆಗಳಿಗೆ 13 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿದೆ ಎಂದರು.

ವಿಶೇಷವಾಗಿ ಗ್ರೋ ಪಿಡಬ್ಲ್ಯೂಡಿ ಸಂಸ್ಥೆಯು ಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್ ಯಂಗ್ ಸಂಸ್ಥೆಯು ಆಯ್ಕೆಯಾದ ಆರು ಅಭ್ಯರ್ಥಿಗಳಿಗೆ ವಾರ್ಷಿಕ ₹ 8.36 ಲಕ್ಷದ ಆಕರ್ಷಕ ಪ್ಯಾಕೇಜ್ ನೀಡಿದೆ. ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ ಪ್ರೈವೇಟ್ ಲಿಮಿಟೆಡ್ 45 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಅವರಲ್ಲಿ ನಾಲ್ವರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ನೀಡಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್‌ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್‌, ಆಳ್ವಾಸ್‌ ಪ್ರಗತಿ- 2026 ಉತ್ಪಾದನಾ ವಲಯ ಮುಖ್ಯಸ್ಥ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ, ಆಳ್ವಾಸ್‌ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ, ಆಳ್ವಾಸ್‌ ತಾಂತ್ರಿಕ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ದಿಶಾ ಶೆಟ್ಟಿ ಇದ್ದರು.

ತಾಲೂಕು ಮಟ್ಟದ ಘಟಕಗಳ ಸ್ಥಾಪನೆ

ಅಭ್ಯರ್ಥಿಗಳಿಗೆ ಗರಿಷ್ಠ ಉದ್ಯೋಗಾವಕಾಶ ದೊರೆಯುವಂತೆ ಮಾಡಲು ವಿವಿಧ ವಲಯಗಳ ಸಂಯೋಜಕರು ನೇಮಕಾತಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೇಮಕಾತಿಯ ಮುಂದಿನ ಹಂತಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅಭ್ಯರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಅವರ ಉದ್ಯೋಗ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಸೂಕ್ತ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ. ‘ಆಳ್ವಾಸ್ ಪ್ರಗತಿ-2026’ ಮೂಲಕ ಲಭಿಸಿದ ಸಮಗ್ರ ಅಭ್ಯರ್ಥಿಗಳ ದತ್ತಾಂಶವನ್ನು ವರ್ಷಪೂರ್ತಿ ಸಕ್ರಿಯವಾಗಿ ಬಳಸಿಕೊಳ್ಳಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಸೂಕ್ತ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ವಿವೇಕ್ ಆಳ್ವ ಹೇಳಿದರು.

ನಿರಂತರ ಉದ್ಯೋಗ ಜಾಗೃತಿ ಕಾರ್ಯಕ್ರಮ

ಅನೇಕ ಅಭ್ಯರ್ಥಿಗಳು ಕೆಲವು ಉದ್ಯೋಗಗಳನ್ನು ನಿರಾಕರಿಸುವುದು ಅಥವಾ ಸ್ಥಳಾಂತರಗೊಳ್ಳಲು ಹಿಂಜರಿಯುವುದು ಕಂಡುಬಂದಿದೆ. ಈ ಕುರಿತು ಸರಿಯಾದ ಉದ್ಯೋಗ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದೆ ಉದ್ಯೋಗ ಮೇಳದ ನಾಲ್ಕೈದು ತಿಂಗಳು ಮುಂಚಿತವಾಗಿ ವಿವಿಧ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ಓರಿಯೆಂಟೇಶನ್ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವಿವೇಕ್ ಆಳ್ವ ತಿಳಿಸಿದರು.

LEAVE A REPLY

Please enter your comment!
Please enter your name here