


ಮಂಗಳೂರು: ಸುರತ್ಕಲ್ ವಿಧಾನಸಭಾ ಕ್ಷೇತ್ರದ ಮಾಧವನಗರ ವ್ಯಾಪ್ತಿಯ ವೆಟ್ವೆಲ್ ಒಳಗಿರುವ ಸುಮಾರು ₹6 ಲಕ್ಷ ಮೌಲ್ಯದ ಬೆಲೆಬಾಳುವ ಮರಗಳನ್ನು ಯಾವುದೇ ಪೂರ್ವ ಅನುಮತಿ ಇಲ್ಲದೆ ಅಕ್ರಮವಾಗಿ ಕಡಿದು ಸಾಗಾಟ ಮಾಡಲಾಗಿದೆ. ಇದರಲ್ಲಿ ಬಿಜೆಪಿ ನಾಯಕರು, ಮಹಾನಗರ ಪಾಲಿಕೆ ಅಧಿಕಾರಿಗಳು ನೇರ ಪಾಲ್ಗೊಂಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಆರೋಪಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧವ ನಗರದ ಒಳಚರಂಡಿ ಮತ್ತು ಮೂಲಸೌಕರ್ಯ ಕಾಮಗಾರಿ ನೆಪದಲ್ಲಿ ಹಲಸು, ಹೆಬ್ಬಲಸು, ಸಾಗುವಾನಿ ಸೇರಿದಂತೆ ವಿವಿಧ ತಳಿಯ ಸುಮಾರು 20ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿಯನ್ನೇ ಪಡೆಯದೆ ಏಕಾಏಕಿ ಕಡಿದು ಕೊಂಡೊಯ್ಯಲಾಗಿದೆ. ಇದರ ಮೌಲ್ಯ ಅಂದಾಜು ₹6 ಲಕ್ಷಕ್ಕೂ ಅಧಿಕವಾಗಿದೆ. ಮರಗಳನ್ನು ಅಕ್ರಮವಾಗಿ ಸಾಗಿಸುವ ಸ್ಥಳದಲ್ಲಿದ್ದ ವೀಡಿಯೊ ಹಾಗೂ ಫೋಟೋ ಸಾಕ್ಷ್ಯಗಳು ಲಭ್ಯವಿವೆ. ಈ ಕೃತ್ಯದಲ್ಲಿ ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಕಾರ್ಪೊರೇಟರ್ ಶ್ವೇತಾ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಪುಷ್ಪರಾಜ್, ಮಂಗಳೂರು ಮಹಾನಗರ ಪಾಲಿಕೆಯ ಕಿರಿಯ ಎಂಜಿನಿಯರ್ ಯತೀಶ್ ಹಾಗೂ ಗುತ್ತಿಗೆದಾರ ಭಾಗಿಯಾಗಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ ಎಂದರು.


ಅಕ್ರಮ ಕಟಾವನ್ನು ಕಂಡು ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ಕಮಿಷನರ್ಗೆ ಅಧಿಕೃತ ದೂರು ಸಲ್ಲಿಸಲಾಗಿದ್ದು, ಸಿಸಿಟಿವಿ ಫೂಟೇಜ್ ಆಧರಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು.


ಶಾಸಕ ಭರತ್ ಶೆಟ್ಟಿ ಮೌನವೇಕೆ?:
ಇತರರಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ನೈತಿಕತೆಯ ಬಗ್ಗೆ ಉಪದೇಶ ನೀಡುವ ಬಿಜೆಪಿ ನಾಯಕರು, ತಮ್ಮದೇ ಪಕ್ಷದ ಪ್ರಮುಖ ಪದಾಧಿಕಾರಿಗಳು ಮರ ಕಳ್ಳತನದ ಆರೋಪ ಎದುರಿಸುತ್ತಿದ್ದರೂ ಮೌನವಾಗಿದ್ದಾರೆ. ಈ ಕುರಿತು ಸುರತ್ಕಲ್ ಶಾಸಕ ಡಾ. ಭರತ್ ಶೆಟ್ಟಿ ತಕ್ಷಣವೇ ಸಾರ್ವಜನಿಕವಾಗಿ ಉತ್ತರ ನೀಡಬೇಕು ಎಂದು ಎಂ.ಜಿ. ಹೆಗಡೆ ಆಗ್ರಹಿಸಿದರು.
ಅರಣ್ಯ ಇಲಾಖಾಧಿಕಾರಿ ಆರ್ಎಫ್ಒ ಅವರಿಗೆ ದೂರು ನೀಡಿದರೆ ಸಾಕ್ಷ್ಯ ಕೇಳುತ್ತಾರೆ. ಈ ಅಧಿಕಾರಿ ಮೇಲೆ ಕೂಡಲೆ ಕ್ರಮ ಆಗಬೇಕು. ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾರಿಕಾ ಪೂಜಾರಿ, ರಾಜೇಶ್ ದೇವಾಡಿಗ, ಚಂದ್ರಹಾಸ್ ಪೂಜಾರಿ ಉಪಸ್ಥಿತರಿದ್ದರು.








