


ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್ಐಟಿಕೆ) ನಕಲಿ ದಾಖಲೆಗಳನ್ನು ಸೃಷ್ಟಿಸಿ 13,51,455 ರು. ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಸಂಸ್ಥೆಯ ಇಬ್ಬರು ಪ್ರಾಧ್ಯಾಪಕರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸ್ಥೆಯ ನಿರ್ದೇಶಕ ಪ್ರೊ.ಬಿ. ರವಿ ಅವರು ನೀಡಿರುವ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.


ಎನ್‌ಐಟಿಕೆಯಲ್ಲಿ ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಪಿ. ಸ್ಯಾಮ್ ಜಾನ್ಸನ್ (48) ಮತ್ತು ಡಾ.ಎಚ್. ಶಿವಾನಂದ ನಾಯಕ (51) ಆರೋಪಿಗಳು. ಇವರಲ್ಲಿ ಮುಖ್ಯ ಆರೋಪಿ ಡಾ.ಪಿ. ಸ್ಯಾಮ್ ಜಾನ್ಸನ್ 12,32,862 ರು. ಹಾಗೂ ಡಾ.ಎಚ್. ಶಿವಾನಂದ ನಾಯಕ 1,18,593 ರು. ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


2023ರ ಮೇ 5ರಿಂದ 16ರ ಅವಧಿಯಲ್ಲಿ ಎನ್‌ಸಿಸಿ ಶಿಬಿರಗಳು ಹಾಗೂ ಕರ್ತವ್ಯಗಳಿಗೆ ಹಾಜರಾಗಿರುವುದಾಗಿ ತೋರಿಸಲು ನಕಲಿ ಆದೇಶ ಪತ್ರಗಳು ಮತ್ತು ಹಾಜರಾತಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದರು. ಅಲ್ಲದೆ, ರದ್ದಾಗಿದ್ದ ಪ್ರಯಾಣದ ಟಿಕೆಟ್‌ಗಳು ಹಾಗೂ ಹೊಟೇಲ್ ಬುಕಿಂಗ್‌ಗಳನ್ನು ತೋರಿಸಿ ಸಂಸ್ಥೆಯಿಂದ ಪ್ರಯಾಣ ಭತ್ಯೆ ಹಾಗೂ ವಸತಿ ವೆಚ್ಚದ ಹಣವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.


ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಾಯ್ದೆ 316(2), 336(3), 316(5), 318(4), 340 ಜತೆಗೆ 3(5) ಅಡಿಯಲ್ಲಿ ಸುರತ್ಕಲ್ ಠಾಣೆಯಲ್ಲಿ ಅಪರಾಧ ಸಂಖ್ಯೆ 122/2026ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








