


ಮಂಗಳೂರು: ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಹಾಜಬ್ಬ ಅವರ ಮನೆಗೆ ತೆರಳಿ ತಪ್ಪನ್ನು ಸರಿಪಡಿಸಿದ್ದಾರೆ.





ಹಾಜಬ್ಬ ಅವರ ಹಳೆ ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು ಈಗಿನ ದಾಖಲೆಗಳಲ್ಲಿರುವ ಹೆಸರಿನಲ್ಲಿ ಬದಲಾವಣೆ ಕಂಡುಬಂದಿದ್ದರಿಂದ ಈ ನೋಟಿಸ್ ನೀಡಲಾಗಿತ್ತು.


2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ಹಾಜಬ್ಬ’ ಎಂದು ನಮೂದಾಗಿತ್ತು. ನಂತರದ ದಿನಗಳಲ್ಲಿ ಆಧಾರ್, ಪಡಿತರ ಚೀಟಿ ಸೇರಿದಂತೆ ಎಲ್ಲ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದೇ ಇದೆ. ಎಸ್ಐಆರ್ ಪರಿಶೀಲನೆ ವೇಳೆ ಹೆಸರಿನಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನಿಯಮದ ಪ್ರಕಾರ ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಆಯೋಗದಿಂದ ನೋಟಿಸ್ ನೀಡಲಾಗಿತ್ತು.
ಹಾಜಬ್ಬರಿಗೆ ನೋಟಿಸ್ ಜಾರಿಯಾದ ವಿಷಯ ತಿಳಿದ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಹಾಜಬ್ಬರ ಮನೆಗೆ ತೆರಳಿ ವಿಷಯ ತಿಳಿಸಿ, ಕ್ಷಮೆ ಕೋರಿದ್ದಾರೆ. ಮಾತ್ರವಲ್ಲದೆ, ಕೆಲವೇ ಗಂಟೆಗಳಲ್ಲಿ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.
ಗಣ್ಯ ಮತದಾರರ ವಿಷಯದಲ್ಲಿ ನೋಟಿಸ್ ನೀಡದೆ ಮೊದಲ ಹಂತದಲ್ಲೇ ಪರಿಹರಿಸಲು ನಮಗೆ ನಿರ್ದೇಶನವಿತ್ತು. ಆದರೆ ಕಾರ್ಯದೊತ್ತಡದಿಂದ ಈ ಪ್ರಮಾದ ಸಂಭವಿಸಿದ್ದು ನಿಜ. ವಿಷಯ ತಿಳಿದ ಕೂಡಲೆ ಹಾಜಬ್ಬ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಅಧಿಕಾರಿಗಳು ಸುದ್ದಿಬಿಡುಗಡೆಗೆ ತಿಳಿಸಿದ್ದಾರೆ.








