ಸೆ. 13ರಂದು ಮಂಗಳೂರಿನಲ್ಲಿ ಮಕ್ಕಳಿಗಾಗಿ ಆವೆಮಣ್ಣಿನ ಗಣಪತಿ ಮೂರ್ತಿ ರಚನಾ ಸ್ಪರ್ಧೆ

ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ಹಾಗೂ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಜಂಟಿ ಆಶ್ರಯದಲ್ಲಿ 5ರಿಂದ 15 ವರ್ಷದ ಮಕ್ಕಳಿಗಾಗಿ “ಆವೆಮಣ್ಣಿನ ಗಣಪತಿ ಮೂರ್ತಿ ರಚನಾ ಸ್ಪರ್ಧೆ” ಸೆ.13ರಂದು ನಡೆಯಲಿದೆ ಎಂದು ಕರಾವಳಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 3:30ರಿಂದ 6:30ರವರೆಗೆ ನಗರದ ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಈ ಅಪರೂಪದ ಕಾರ್ಯಕ್ರಮ ನಡೆಯಲಿದೆ ಎಂದರು.

​ಸ್ಪರ್ಧೆಯನ್ನು ಒಟ್ಟು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಒಂದನೇ ತರಗತಿಯಿಂದ 4ನೇ ತರಗತಿಯವರೆಗಿನ ಮಕ್ಕಳು ಮೊದಲ ವಿಭಾಗದಲ್ಲಿ, 5ರಿಂದ 7ನೇ ತರಗತಿ ವಿದ್ಯಾರ್ಥಿಗಳ 2ನೇ ವಿಭಾಗ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ಮೂರನೇ ವಿಭಾಗದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೆ ಆಯೋಜಕರೇ ಉಚಿತವಾಗಿ ಆವೆಮಣ್ಣನ್ನು ಪೂರೈಸಲಿದ್ದು, ಮೂರ್ತಿ ರಚನೆಗೆ ಒಂದೂವರೆ ಗಂಟೆಯ ಕಾಲಾವಕಾಶ ನೀಡಲಾಗುತ್ತದೆ. ಸ್ಪರ್ಧೆ ಆರಂಭವಾಗುವ ಮುನ್ನ ನುರಿತ ಕಲಾವಿದರಿಂದ ಅರ್ಧ ಗಂಟೆ ಕಾಲ ಆವೆಮಣ್ಣಿನಿಂದ ಸುಲಭವಾಗಿ ಮೂರ್ತಿ ರಚಿಸುವ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಯಲಿದೆ. ಇದೇ ವೇಳೆ ಕರಾವಳಿ ಚಿತ್ರಕಲಾ ಚಾವಡಿಯ ಸದಸ್ಯ ಕಲಾವಿದರ ಕಲಾಕೃತಿಗಳ ವಿಶೇಷ ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ಗಣೇಶ ಸೋಮಯಾಜಿ ತಿಳಿಸಿದರು.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪರಿಸರ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಪೇಂಟ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಎಲೆ, ಹೂವು, ಕಾಳುಗಳು, ಅರಿಶಿನ ಹಾಗೂ ಕುಂಕುಮದಂತಹ ನೈಸರ್ಗಿಕ ವಸ್ತುಗಳಿಂದ ಮಾತ್ರ ಮೂರ್ತಿಯನ್ನು ಅಲಂಕರಿಸಲು ಅವಕಾಶ ನೀಡಲಾಗಿದೆ. ಮಕ್ಕಳಲ್ಲಿ ಸ್ಪರ್ಶಜ್ಞಾನ, ಸೃಜನಶೀಲತೆ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಬೆಳೆಸುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ನಗರದ ಹೆಚ್ಚಿನ ಸಂಖ್ಯೆಯ ಮಕ್ಕಳು ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ ಎಂದರು.

ನೋಂದಣಿಯನ್ನು ಕೇವಲ ವಾಟ್ಸಪ್ ಮೂಲಕ ಮಾತ್ರ ಮಾಡಬೇಕು. ವಾಟ್ಸಪ್ ಸಂಖ್ಯೆ- 99167 77241.

ಸಂಸ್ಥೆಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಕರಾವಳಿ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಡಾ. ಜಯಪ್ರಕಾಶ್ ಸಿ., ಕಾರ್ಯದರ್ಶಿ ಪುನೀಕ್ ಶೆಟ್ಟಿ, ಶರಧಿ ಪ್ರತಿಷ್ಠಾನದ ಯೋಗಗುರು ಜಗದೀಶ್ ಶೆಟ್ಟಿ ಇದ್ದರು.

LEAVE A REPLY

Please enter your comment!
Please enter your name here