ಸಂಪುಟ ಸಭೆಯಲ್ಲಿ ಯೋಜನೆ ಜತೆ ಅನುದಾನವನ್ನೂ ಘೋಷಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು: ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಕೇವಲ ಯೋಜನೆಗಳನ್ನು ಘೋಷಿಸಿದರೆ ಸಾಲದು. ಅದಕ್ಕೆ ಅಗತ್ಯವಿರುವ ಅನುದಾನವನ್ನೂ ಘೋಷಿಸಬೇಕು ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ 2ನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು. ದ.ಕ.ವನ್ನು ಮಂಗಳೂರು ಜಿಲ್ಲೆ ಎಂದು ಘೋಷಿಸಬೇಕು. ಧಾರ್ಮಿಕ ಪ್ರವಾಸೋದ್ಯಮ ನೀತಿ ಘೋಷಿಸಬೇಕು. ಮಂಗಳೂರಿನ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಮೀನುಗಾರರ ಬದುಕಿಗೆ ಪೂರಕವಾಗುವ ಪ್ರವಾಸೋದ್ಯಮ ನೀತಿಯನ್ನೂ ರೂಪಿಸಬೇಕು ಎಂದರು.

ಕಂಬಳಕ್ಕೆ 10 ಲಕ್ಷ ರು. ಅನುದಾನ ನೀಡಬೇಕು. ರಾಣಿ ಅಬ್ಬಕ್ಕ ಹೆಸರಿನಲ್ಲಿ 1 ಕೋ.ರು. ಅನುದಾನ ನೀಡಿ ಜಿಲ್ಲಾ ಉತ್ಸವ ನಡೆಸಬೇಕು. ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಬೇಕು. ಎಸ್ಸಿ-ಎಸ್ಟಿ ಕಾಲನಿಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು. ನಾರಾಯಣ ಗುರು ನಿಗಮ, ಬಂಟರ ನಿಗಮ, ಅರೆಭಾಷೆ ಒಕ್ಕಲಿಗ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಸತೀಶ್ ಕುಂಪಲ ಆಗ್ರಹಿಸಿದರು.

ಶಾಸಕರಾದ ಡಾ. ಧನಂಜಯ ಸರ್ಜಿ, ಕಿಶೋರ್ ಕುಮಾರ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವಾರ್, ಸಂಜಯ್ ಪ್ರಭು, ಅರುಣ್ ಶೇಟ್, ವಸಂತ ಪೂಜಾರಿ ಇದ್ದರು.

LEAVE A REPLY

Please enter your comment!
Please enter your name here