ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲು – ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಆದೇಶ

ಮಂಗಳೂರು: ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಸಂಪುಟ ದರ್ಜೆಯ ಸಚಿವರು ನಗರದಲ್ಲಿ ವಾಸ್ತವ್ಯ ಹೂಡಲಿರುವ ಕಾರಣ ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ಹಲವು ಪರ್ಯಾಯ ಮಾರ್ಗಗಳನ್ನು ಸೂಚಿಸಿ ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಸೆ.17ರಂದು ಸಂಜೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಮಂಗಳೂರಿಗೆ ಆಗಮಿಸಲಿದ್ದಾರೆ. ಸೆ.18ರಂದು ಬೆಳಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ ಮೇರಿಹಿಲ್‌ನಲ್ಲಿರುವ ಹೆಲಿಪ್ಯಾಡ್ ಮುಖಾಂತರ ಉಡುಪಿಗೆ ತೆರಳಿ, ನಂತರ ಮಂಗಳೂರು ನಗರಕ್ಕೆ ವಾಪಸಾಗಿ ತಂಗಲಿದ್ದಾರೆ. ಮರುದಿನ ಬೆಳಗ್ಗೆ ಮಂಗಳೂರಿನಿಂದ ನಿರ್ಗಮಿಸಲಿದ್ದಾರೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆಯಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಗಣ್ಯರ ಭದ್ರತೆ ದೃಷ್ಟಿಯಿಂದ ಹಾಗೂ ನಗರದಲ್ಲಿ ಸಂಚಾರ ಸುವ್ಯವಸ್ಥೆ ಹಿತದೃಷ್ಟಿಯಿಂದ ಸಾರ್ವಜನಿಕರು ಸುರಕ್ಷಿತವಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಿದ್ದಾರೆ.

ಗಣ್ಯರ ಸಂಚಾರ ಇರುವ ರಸ್ತೆಗಳು:
ಸೆ.17ರ ಸಂಜೆ ಮತ್ತು ಸೆ.19ರ ಬೆಳಗ್ಗೆ: ಬಜಪೆ ವಿಮಾನ ನಿಲ್ದಾಣದಿಂದ ಕಾವೂರು- ಬೋಂದೆಲ್– ಮೇರಿಹಿಲ್– ಕೆ.ಪಿ.ಟಿ.– ಕದ್ರಿ ಕಂಬಳ- ಬಂಟ್ಸ್ ಹಾಸ್ಟೆಲ್– ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್- ಹಂಪನಕಟ್ಟೆ– ಕ್ಲಾಕ್ ಟವರ್ – ಹ್ಯಾಮಿಲ್ಟನ್ ಜಂಕ್ಷನ್.
ಸೆ.18ರಂದು ಬೆಳಗ್ಗೆ: ಹ್ಯಾಮಿಲ್ಟನ್ ಜಂಕ್ಷನ್ – ಕ್ಲಾಕ್ ಟವರ್- ಹಂಪನಕಟ್ಟೆ – ಡಾ.ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಕೆ.ಪಿ.ಟಿ. ಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ನಾಗುರಿ – ಬಜಾಲ್ ಕ್ರಾಸ್ (ಪ್ರಜಾಸೌಧ)- ಪಡೀಲ್ ಜಂಕ್ಷನ್.
ಈ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಬಾರದು. ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.

ಬದಲಿ ಮಾರ್ಗಗಳು: ಬದ್ರಿಯಾ ಜಂಕ್ಷನ್‌ನಿಂದ ಹೊಟೇಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪರ್ಯಾಯವಾಗಿ ಬದ್ರಿಯಾ ಜಂಕ್ಷನ್ – ನಿಲೇಶ್ವರ ರಸ್ತೆ – ರೋಸಾರಿಯೊ ರಸ್ತೆ ಮುಖೇನ ಸಂಚರಿಸಬೇಕು.
ಅದೇ ರೀತಿ ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಹೊಟೇಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪರ್ಯಾಯವಾಗಿ ಹ್ಯಾಮಿಲ್ಟನ್ ಜಂಕ್ಷನ್ – ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.
ಪಂಪುವೆಲ್ ಜಂಕ್ಷನ್‌ನಿಂದ ನಾಗುರಿ ಮೂಲಕ ಪಡಿಲ್ ಜಂಕ್ಷನ್ ಕಡೆಗೆ ಅಥವಾ ಪಡಿಲ್ ಜಂಕ್ಷನ್ ಕಡೆಯಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪರ್ಯಾಯವಾಗಿ ನಂತೂರು ವೃತ್ತ – ಕೈಕಂಬ – ಮರೋಳಿ ಮೂಲಕ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮೂಲಕ ಸಂಚರಿಸಬೇಕು.
ಬಜಾಲ್ ಕ್ರಾಸ್ (ಪ್ರಜಾಸೌಧ)ನಿಂದ ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ಕಡೆಗೆ ಬರುವ ಮತ್ತು ಹೋಗುವ ಎಲ್ಲ ತರಹದ ವಾಹನಗಳು ಪಡೀಲ್ ಬಜಾಲ್ ಕ್ರಾಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ- ಬಜಾಲ್ ಮೂಲಕ ಸಂಚರಿಸಬೇಕು.
ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮೂಲಕ ನಗರಕ್ಕೆ ಸಂಚರಿಸಬೇಕು. ಸಾರ್ವಜನಿಕರು ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here