ಎಲ್ಲ ವರ್ಗದ ಬಡವರಿಗೆ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆಗೆ ಚಿಂತನೆ: ಸಚಿವ ಕೆ.ಎಚ್ ಮುನಿಯಪ್ಪ – ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಗಳನ್ನು ಹೆಚ್ಚಿಸಲು ಕ್ರಮ

ಮಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ವರ್ಗದ ಬಡ ಜನರಿಗೆ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆ ಮಾಡಲು ಸರ್ಕಾರ ಚಿಂತಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ನಗರದ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಒಡೆತನ ಯೋಜನೆಯಲ್ಲಿ ಭೂಮಿ ಇಲ್ಲದ ಪರಿಶಿಷ್ಟರಿಗೆ ಭೂಮಿ ಒದಗಿಸಲು ಸರ್ಕಾರ ಮುಂದಾಗಿದೆ. ಹಾಗೆಯೇ ನಿರಾಶ್ರಿತರಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಬೇಡಿಕೆಗೆ ತಕ್ಕಂತೆ ಆರಂಭಿಸಲಾಗುವುದು. ಅದೇ ರೀತಿ ವಸತಿ ಶಾಲೆಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಇದ್ದು, ಇವುಗಳನ್ನು ಕೂಡ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉಪಯೋಜನೆ ಕಾರ್ಯಕ್ರಮಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿವಿಧ ಇಲಾಖೆಯ ಶೇ.24ರಷ್ಟು ಅನುದಾನ ಪರಿಶಿಷ್ಟರಿಗೆ ತಲುಪುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಸಮುದಾಯ ಭವನ ನಿರ್ಮಾಣಕ್ಕೆ ಬೇಡಿಕೆ ಇದ್ದು, ಜಿಲ್ಲಾ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 4 ಕೋಟಿ ರು., ತಾಲೂಕು ಮಟ್ಟದಲ್ಲಿ 2 ಕೋಟಿ ರು., ಹೋಬಳಿ ಮಟ್ಟದಲ್ಲಿ 85 ಲಕ್ಷ ರು, ಪಂಚಾಯ್ತಿ ಮಟ್ಟದಲ್ಲಿ 20 ಲಕ್ಷ ರು. ಅನುದಾನ ಭರಿಸಲಾಗುತ್ತಿದ್ದು, ಗ್ರಂಥಾಲಯ ಒಳಗೊಂಡಂತೆ ವಿವಿಧ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here