


ಮಂಗಳೂರು: ಮಂಗಳೂರು ಮೀನುಗಾರಿಕಾ ಧಕ್ಕೆಯಲ್ಲಿ ಮೂರನೇ ಹಂತದ ಜೆಟ್ಟಿ ನಿರ್ಮಾಣ ಕಾಮಗಾರಿಗೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸುವ ಮೂಲಕ ಮೀನುಗಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಹಾಗೂ ಮಂಗಳೂರು ಟ್ರಾಲ್ಬೋಟ್ ಮೀನುಗಾರರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.





ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಾಲ್ಬೋಟ್ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್, ಸಂಘದ ಹಲವಾರು ವರ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ 1 ಮತ್ತು 2ನೇ ಹಂತದ ಜೆಟ್ಟಿಗೆ ೩೭.೫೦ ಕೋಟಿ ರು. ಹಾಗೂ 3ನೇ ಹಂತದ ಕಾಮಗಾರಿಗೆ ೪೯.೫೦ ಕೋಟಿ ರು. ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ. ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ವೇಗ ತೀರ ಕುಂಠಿತವಾಗಿದೆ. ಮೀನುಗಾರಿಕಾ ಚಟುವಟಿಕೆಗಳು ಹಾಗೂ ಬಂದರಿನ ಕಾರ್ಯ ನಿರ್ವಹಣೆಯ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.


ಟ್ರಾಲ್ ಬೋಟ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ, ಪರ್ಸೀನ್ ಮೀನುಗಾರರ ಸಂಘದ ಮುಖಂಡರಾದ ಮೋಹನ್ ಬೆಂಗ್ರೆ, ಫೈಜಲ್ ಕುದ್ರೋಳಿ, ಸಲೀಂ ನರಿಂಗಾನ ಮತ್ತಿತರರು ಇದ್ದರು.







