ಎಸ್‌ಐಆರ್ ರದ್ದುಗೊಳಿಸಿ, 2023ರಿಂದ ಚುನಾವಣಾ ಆಯೋಗದ ನಿರ್ಧಾರಗಳ ತನಿಖೆ ಮಾಡಿ: ನಟ ಪ್ರಕಾಶ್ ರೈ ಆಗ್ರಹ – ​ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನವೆಂಬರ್ ಸಂಸತ್ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ವಿಪಕ್ಷಗಳಿಗೆ ಒತ್ತಾಯ

ಮಂಗಳೂರು: ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಂವಿಧಾನದ ವಿರುದ್ಧ ನಡೆಯುತ್ತಿದ್ದು, ಕೋಟ್ಯಂತರ ಮತದಾರರನ್ನು ಹೊರಗಿಡುವ ಷಡ್ಯಂತ್ರ ನಡೆದಿದೆ. ಈ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ 2023ರಿಂದ ಈವರೆಗೆ ಚುನಾವಣಾ ಆಯೋಗ ಕೈಗೊಂಡಿರುವ ಪ್ರತಿ ತೀರ್ಮಾನ, ನಿಯಮಗಳು, ಪ್ರಕ್ರಿಯೆಗಳು ಮತ್ತು ಅವುಗಳ ಆಧಾರದಲ್ಲಿ ನಡೆದ ಚುನಾವಣೆಗಳ ಪರಿಣಾಮಗಳ ಕುರಿತು ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ​ಎಸ್ಐಆರ್ ನ್ನು ತಕ್ಷಣ ಫ್ರೀಝ್ ಅಥವಾ ಸ್ಕ್ರಾಪ್ ಮಾಡಿ. 2025ರ ಫೆಬ್ರವರಿಯಲ್ಲಿ ಅಪ್‌ಡೇಟ್ ಆದ ಮತದಾರರ ಪಟ್ಟಿಯನ್ನೇ ಪುನಃ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಎಸ್ಐಆರ್ ನಂತರದ ಚುನಾವಣೆಗಳ ರದ್ದು:

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಿ, 2023ರಿಂದ ಈವರೆಗೆ ಚುನಾವಣಾ ಆಯೋಗ ತೆಗೆದುಕೊಂಡಿರುವ ಎಲ್ಲ ನಿರ್ಧಾರ, ನಿಯಮ, ಪ್ರಕ್ರಿಯೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಚುನಾವಣಾ ಆಯೋಗದ ಕಡತಗಳು ಅಥವಾ ಸಾಕ್ಷ್ಯಗಳು ನಾಶವಾಗುವ ಮುನ್ನವೇ ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆಯಬೇಕು. ಅಲ್ಲದೆ, ಎಸ್ಐಆರ್ ಮಾಡಿದ ನಂತರ ನಡೆದ ವಿವಿಧ ರಾಜ್ಯಗಳ ಚುನಾವಣೆಗಳ ಮಾನ್ಯತೆಯನ್ನು ಪರಿಶೀಲಿಸಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

​ಸಂಸತ್ತಿನಲ್ಲಿ ಜ್ಞಾನೇಶ್ ವಿರುದ್ಧ ಅಭಿಶಂಸನೆಗೆ ಕರೆ:

ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಮೊದಲು ನೋಟಿಸ್ ನೀಡುವುದು ಕಡ್ಡಾಯ. ಆದರೆ ದೇಶದ 13 ಕೋಟಿ ಮತದಾರರ ಹೆಸರನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಡಿಲೀಟ್ ಮಾಡಲಾಗಿದೆ. ಹೀಗಾಗಿ ಮುಂಬರುವ ನವೆಂಬರ್ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರೆಲ್ಲರೂ ಒಗ್ಗೂಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಭಿಶಂಸನೆ (ಇಂಪೀಚ್ ಮೆಂಟ್) ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.

ಜೆನ್-ಝಿ ಸೇರ್ಪಡೆ ಸಮರ್ಪಕವಿಲ್ಲ:

2024ರಿಂದ ಹೊಸ ಯುವ ಮತದಾರರನ್ನು (ಜೆನ್ ಝಿ) ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಯುವಜನರು, ರೈತರು, ವಕೀಲರು, ಬುದ್ಧಿಜೀವಿಗಳು ಹಾಗೂ ಸಾರ್ವಜನಿಕರು ಬೃಹತ್ ಹೋರಾಟಕ್ಕೆ ಅಣಿಯಾಗಬೇಕಿದೆ ಎಂದು ಪ್ರಕಾಶ್ ರೈ ಪ್ರತಿಪಾದಿಸಿದರು.

ಒಂದೇ ತಿಂಗಳಲ್ಲಿ ಮುಗಿಸುವ ತುರ್ತು ಏಕೆ?:

ಕರ್ನಾಟಕದಲ್ಲಿ ಒಟ್ಟು 5.5 ಕೋಟಿ ಮತದಾರರಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಸಮಯ ಇರಬೇಕಾದರೆ ಕೇವಲ ಒಂದೇ ತಿಂಗಳಲ್ಲಿ ಈ ಬೃಹತ್ ಪ್ರಕ್ರಿಯೆಯನ್ನು ಏಕಾಏಕಿ ಮುಗಿಸಲು ಮುಂದಾಗಿದ್ದು ಏಕೆ? ಕರ್ನಾಟಕದಲ್ಲಿ ಬರೋಬ್ಬರಿ 1 ಕೋಟಿ 8 ಲಕ್ಷ ಮತಗಳನ್ನು ತೆಗೆದು ಹಾಕಲು ಷಡ್ಯಂತ್ರ ಮಾಡಿದ್ದಾರೆ. ಅಲ್ಲದೆ 43 ಲಕ್ಷ ಮತದಾರರನ್ನು ಅನ್‌ಮ್ಯಾಪ್ಡ್ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಹೆಸರಿನಲ್ಲಿ ನೋಟಿಸ್ ನೀಡದೆ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಪ್ರಕಾಶ್ ರೈ ಆರೋಪಿಸಿದರು.

ಮುಖಂಡರಾದ ಕೆ.ಎಲ್. ಅಶೋಕ್, ಅಬ್ದುಲ್ ಮಜೀದ್, ಎಂ.ಜಿ. ಹೆಗಡೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here