ಸಚಿವ ಸಂಪುಟದ ಘೋಷಣೆ ಅನುಷ್ಠಾನದ ಜವಾಬ್ದಾರಿ ನಮ್ಮದು: ಸಚಿವ ಯು.ಟಿ. ಖಾದರ್‌ – ಬಿಜೆಪಿಯವರು ತಮ್ಮ ಅವಧಿಯಲ್ಲಿ ಕರಾವಳಿಗೆ ಕೊಟ್ಟ ಯೋಜನೆಗಳ ಪಟ್ಟಿ ನೀಡಲಿ – ಮೋಹನ್ ಆಳ್ವರ ವರದಿ 4 ತಿಂಗಳು ಅವರ ಕೈಯಲಿದ್ದೂ ಮಾನ್ಯತೆ ನೀಡಲು ಆಗಿಲ್ಲ

ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಘೋಷಣೆ ಮಾಡಿದ ಎಲ್ಲ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ನಮ್ಮದು. ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಘೋಷಣೆ ಮಾಡಿದ ಯೋಜನೆಗಳ ಅನುಷ್ಠಾನ ಮುಖ್ಯಮಂತ್ರಿ ಹಾಗೂ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅದನ್ನು ಹೇಗೆ, ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.

ಬಿಜೆಪಿಯವರು ಕರಾವಳಿಗೆ ಏನು ಮಾಡಿದ್ದಾರೆ?:

ಸಚಿವ ಸಂಪುಟ ಸಭೆಯ ತೀರ್ಮಾನಗಳ ಕುರಿತು ಆರೋಪಿಸುವ ಬಿಜೆಪಿಯವರು ತಮ್ಮ ಅವಧಿಯಲ್ಲಿ ಕರಾವಳಿಗೆ ಏನು ಮಾಡಿದ್ದಾರೆ? ಕನಿಷ್ಠ ಸಚಿವ ಸಂಪುಟ ಸಭೆಯನ್ನು ಕರಾವಳಿಯಲ್ಲಿ ಮಾಡಲು ಅವರಿಂದ ಸಾಧ್ಯವಾಗಿದೆಯಾ? ತುಳು ಭಾಷೆಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿ ಮೋಹನ್‌ ಆಳ್ವ ಸಮಿತಿ ನೀಡಿದ ವರದಿ ನಾಲ್ಕು ತಿಂಗಳು ಬಿಜೆಪಿ ಸರ್ಕಾರದ ಕೈಯ್ಯಲ್ಲಿತ್ತು. ಕರಾವಳಿಯವರೇ ಆದ ಸುನಿಲ್‌ ಕುಮಾರ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು. ಕೇವಲ ಸಹಿ ಹಾಕಲು ಮಾತ್ರ ಬಾಕಿ ಇದ್ದದ್ದು. ಅದನ್ನೂ ಬಿಜೆಪಿ ಅವಧಿಯಲ್ಲಿ ಮಾಡಲು ಸಾಧ್ಯವಾಗಿಲ್ಲ. ಸುಮ್ಮನೆ ಆರೋಪ ಮಾಡುತ್ತಾ ಹೋದರೆ ಜಿಲ್ಲೆಯ ಜನ ಇವರನ್ನು ಕ್ಷಮಿಸುವುದಿಲ್ಲ. ಉಪಕಾರ ಮಾಡಿದವರನ್ನು ಇಲ್ಲಿನ ಜನ ಮರೆಯಲ್ಲ, ಮುಂದಿನ ದಿನಗಳಲ್ಲಿ ಜನತೆ ಅದನ್ನು ತೋರಿಸಿಕೊಡಲಿದ್ದಾರೆ ಎಂದು ಯು.ಟಿ. ಖಾದರ್ ತಿರುಗೇಟು ನೀಡಿದರು.

ಯೋಜನೆಗಳು ಘೋಷಣೆಯಾಗಿ ಕನಿಷ್ಠ ಆರರಿಂದ ಒಂದು ವರ್ಷವಾದರೂ ಜಾರಿಯಾಗದಿದ್ದರೆ ಆರೋಪ ಮಾಡಲಿ. ಆದರೆ ಸಚಿವ ಸಂಪುಟ ಆಗುವ ಮೊದಲೇ ಶಾಸಕ ವೇದವ್ಯಾಸ ಕಾಮತ್‌ ಅವರು ಚೊಂಬು ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿದ್ದರೆ ಏನು ಮಾಡಲು ಸಾಧ್ಯ ಎಂದು ಟೀಕಿಸಿದರು.

———-

ವೆನ್ಲಾಕ್ ದಟ್ಟಣೆ ತಪ್ಪಿಸಲು ಆಯಾ ಜಿಲ್ಲೆಗಳಲ್ಲೇ ಚಿಕಿತ್ಸೆಗೆ ಶಿಫಾರಸು

ಜಿಲ್ಲಾಸ್ಪತ್ರೆ ವೆನ್‌ಲಾಕ್‌ನಲ್ಲಿ ಉತ್ತಮ ಸೇವೆ ದೊರೆಯುತ್ತಿರುವುದರಿಂದ ಹೊರ ಜಿಲ್ಲೆಯವರೂ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಕಾಸರಗೋಡು ಮೊದಲಾದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಅಲ್ಲಿಂದ ವೆನ್‌ಲಾಕ್‌ಗೆ ರೋಗಿಗಳನ್ನು ಶಿಫಾರಸು ಮಾಡುತ್ತಿರುವುದರಿಂದ ವೆನ್ಲಾಕ್ ನಲ್ಲಿ ಬೆಡ್ ಕೊರತೆ ಆಗುತ್ತಿದೆ. ಸಂದಿಗ್ಧ ಪರಿಸ್ಥಿತಿಯ ರೋಗಿಗಳನ್ನು ಹೊರತುಪಡಿಸಿ, ಆಯಾ ಜಿಲ್ಲೆಗಳ ರೋಗಿಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕಿದೆ. ಈ ಸಮಸ್ಯೆ ನೀಗಿಸಲು ಸ್ಟಾಂಡರ್ಡ್‌ ಅಪರೇಶನ್‌ ಪ್ರೊಸೀಜರ್‌ (ಎಸ್‌ಒಪಿ) ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲಹೆ ನೀಡಲಾಗಿದೆ ಎಂದರು.

ತಾಲೂಕು ಆಸ್ಪತ್ರೆಗಳನ್ನು ಬಲಪಡಿಸುವ ಉದ್ದೇಶದಿಂದ ಬೈಂದೂರು ಮತ್ತು ಮೂಡುಬಿದಿರೆಯಲ್ಲಿ ಹೊಸ ತಾಲೂಕು ಆಸ್ಪತ್ರೆ ಹಾಗೂ ಭಟ್ಕಳದ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸಂತೋಷ್‌ ಕುಮಾರ್‌, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್‌, ಮುಖಂಡರಾದ ಸಲೀಂ, ಇಕ್ಬಾಲ್‌ ಇದ್ದರು.

———–

ಡಿಸಿ ಮನ್ನಾ ಕುರಿತು ಸರ್ಕಾರ ನಿರ್ಧಾರ: ಖಾದರ್

ಡಿಸಿ ಮನ್ನಾ ಜಾಗ ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗದ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್, ಅವರು ನಮ್ಮ ಸಹೋದರರು. ಅವರ ನೋವು ನಮಗೆ ಅರ್ಥವಾಗುತ್ತದೆ. ಇದು ಕಂದಾಯ ಇಲಾಖೆಯ ಸಮಸ್ಯೆ ಆಗಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸಿ, ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆಯೂ ಕೋರಲಾಗಿತ್ತು. ಬಂದಿಲ್ಲ ಎಂದಾದರೆ ಸರ್ಕಾರ ನಿರ್ಣಯ ಕೈಗೊಳ್ಳಬೇಕಿದೆ. ಮೂಡುಬಿದಿರೆ ಸತ್ಯಸಾರಮಣಿ ಕ್ಷೇತ್ರಕ್ಕೆ ಅನುದಾನ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು, ಅದನ್ನು ಒದಗಿಸಲಾಗುತ್ತದೆ ಎಂದು ಸಚಿವ ಯು.ಟಿ.ಖಾದರ್‌ ಭರವಸೆ ನೀಡಿದರು.

LEAVE A REPLY

Please enter your comment!
Please enter your name here