


ಮಂಗಳೂರು: ಭಾರತದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಕ್ತಿಯನ್ನು ಜಾಗೃತಗೊಳಿಸುವುದು ತಮ್ಮ ಪರಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜ್ಞಾನದ ದೀಪವನ್ನು ಬೆಳಗಿಸಿ, ಅವರನ್ನು ಸಂಘಟಿತರನ್ನಾಗಿ ಮಾಡುವುದು ತಮ್ಮ ಮುಖ್ಯ ಗುರಿ ಎಂದು ಉದ್ಯಮಿ ಹಾಗೂ ಆಧ್ಯಾತ್ಮಿಕ ಚಿಂತಕ ರಾಜರ್ಷಿ ಡಾ.ಬಿ. ಕೆ. ಮೋದಿ ಹೇಳಿದ್ದಾರೆ.





ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ವತಿಯಿಂದ ನಗರದ ಶಾರದಾ ವಿದ್ಯಾಲಯದ ಭೂವರಾಹ ಸಭಾಂಗಣದಲ್ಲಿ ಶುಕ್ರವಾರ ಗೌರವ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.


ಬ್ರಾಹ್ಮಣರು ತಮ್ಮಲ್ಲಿರುವ ಅಪಾರ ಜ್ಞಾನ ಮತ್ತು ಶಕ್ತಿಯನ್ನು ಪುನಃ ಕಂಡುಕೊಳ್ಳಬೇಕಿದೆ. ಪ್ರತಿಯೊಬ್ಬ ಬ್ರಾಹ್ಮಣನೂ ಸಾವಿರಾರು ಜನರಿಗೆ ದಾರಿದೀಪವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕೇವಲ ಸಂಸ್ಕೃತ ಶ್ಲೋಕಗಳನ್ನು ಪಠಿಸುವುದಷ್ಟೇ ಅಲ್ಲದೆ, ಪೂಜೆ ಮತ್ತು ಆಚರಣೆಗಳ ನೈಜ ಅರ್ಥ ಹಾಗೂ ತತ್ತ್ವಗಳನ್ನು ಯುವಜನತೆಗೆ ಅವರು ಅರ್ಥೈಸಿಕೊಳ್ಳುವ ಭಾಷೆಯಲ್ಲಿ ವಿವರಿಸಿ, ಸನಾತನ ಧರ್ಮದ ಬಗ್ಗೆ ಅವರಲ್ಲಿ ಹೆಮ್ಮೆ ಮೂಡಿಸಬೇಕು ಎಂದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಸಿ: ಇಂದಿನ ವೇಗದ ಯುಗದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕೃತ ವ್ಯಾಕರಣ ಕಲಿಯಲು ಸಮಯವಿಲ್ಲದಿರಬಹುದು. ಆದ್ದರಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಗವದ್ಗೀತೆ, ವೇದ, ಉಪನಿಷತ್ ಹಾಗೂ ಶಂಕರಾಚಾರ್ಯರ ಭಾಷ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಬೇಕು ಎಂದು ಬಿ.ಕೆ. ಮೋದಿ ಪ್ರತಿಪಾದಿಸಿದರು.
ಕರಾವಳಿ ವಿಶ್ವ ದರ್ಜೆ ಪ್ರವಾಸಿ ಕೇಂದ್ರವಾಗಲಿ: ಕರಾವಳಿಯ ಸುಂದರ ಸಮುದ್ರ ತೀರಗಳನ್ನು ಬಳಸಿಕೊಂಡು ಈ ಪ್ರದೇಶವನ್ನು ವಿಶ್ವದರ್ಜೆಯ ಶ್ರೇಷ್ಠ ಪ್ರವಾಸಿ ಹಾಗೂ ಆರ್ಥಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ವಿಶಾಲ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.
ಅಭಿನಂದನಾ ಭಾಷಣ ಮಾಡಿದ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಬಿ.ಕೆ. ಮೋದಿ ಅವರು ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪ್ರತಿಪಾದಿಸಿದ್ದಾರೆ. ಹಿಂದೂ ಧರ್ಮದ ಮೇಲಿನ ಅವರ ಪ್ರೀತಿಯಿಂದ ಅಮೆರಿಕದ ಹಿಂದೂಗಳು ‘ವಿಶ್ವಗುರು’ ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ ಎಂದರು.
ಭಾರತದಲ್ಲಿ ಇಂದು ಅನ್ಯಧರ್ಮೀಯರಿಂದ ಹಿಂದು ಧರ್ಮಕ್ಕೆ ಅಪಾಯವಲ್ಲ, ಹಿಂದು ಧರ್ಮದಲ್ಲಿ ಹುಟ್ಟಿದ ಕೆಲವರು ಹಿಂದು ಧರ್ಮಕ್ಕೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರೂ ಎಚ್ಚರ ವಹಿಸಬೇಕು ಎಂದು ಹೇಳಿದರು.
ದುಬೈ ಉದ್ಯಮಿ ಋಷಿ ವಿಜಯವ್ಯಾಸ, ದ.ಕ. ದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಮತ್ತು ಟ್ರಸ್ಟಿ ಸಮೀರ್ ಪುರಾಣಿಕ್ ಇದ್ದರು. ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಡಾ. ಸೀತಾರಾಮ ಭಟ್ ದಂಡತೀರ್ಥ ಸ್ವಾಗತಿಸಿದರು. ದಯಾನಂದ ಕಟೀಲ್ ನಿರೂಪಿಸಿದರು. ಈ ವೇಳೆ ವಿವಿಧ ವಿಪ್ರ ಸಂಘಟನೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಸುಧಾಕರ ರಾವ್ ಪೇಜಾವರ ಇದ್ದರು.








