


ಮಂಗಳೂರು: ಸನಾತನ ಧರ್ಮವೇ ಭಾರತ ಮಾತೆಯ ನೈಜ ಜೀವಶಕ್ತಿ. ಪ್ರತಿಯೊಬ್ಬ ಭಾರತೀಯನ ಉಸಿರಿನಲ್ಲೂ ಸನಾತನ ಧರ್ಮದ ತತ್ವಗಳು ಮನೆಮಾಡಿವೆ ಎಂದು ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ಶ್ರೀಕೃಷ್ಣ ಗಜಾನನ ಕುಲಕರ್ಣಿ ಪ್ರತಿಪಾದಿಸಿದ್ದಾರೆ.





ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಕುಂಬ್ರ ಜತ್ತಪ್ಪ ರೈ ಅವರ ಜೀವನದ ಕುರಿತು ಸಂಪಾದಿಸಲಾದ ‘ಗಾಂಧಿ ಪಜ್ಜೆದ ಸಾದಿ ಪತ್ತೊಂದು’ ತುಳು ಭಾಷಾಂತರ ಪುಸ್ತಕದ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಪ್ರಧಾನ ಭಾಷಣ ಮಾಡಿದರು.


ಮಹಾತ್ಮ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯದ ವಿಚಾರಧಾರೆಗೆ ಸನಾತನ ಧರ್ಮ ಹಾಗೂ ಭಗವದ್ಗೀತೆಯೇ ಮುಖ್ಯ ಮೂಲವಾಗಿತ್ತು ಎಂದರು.
ಹಳ್ಳಿಹಳ್ಳಿಯಲ್ಲೂ ಸನಾತನ ಧರ್ಮ ಜಾಗೃತ:
ನಾನು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ನಡೆಸಿದ 7,500 ಕಿ.ಮೀ. ಪಾದಯಾತ್ರೆಯು ಭಾರತದ ಆಂತರಿಕ ಶಕ್ತಿಯನ್ನು ಹತ್ತಿರದಿಂದ ಕಾಣುವಂತೆ ಮಾಡಿತು. ಗ್ರಾಮಗಳಲ್ಲಿ ಸಂಚರಿಸಿದಾಗ ಭಾರತ ಮಾತೆಯ ಪ್ರತಿಯೊಂದು ಉಸಿರಿನಲ್ಲೂ ಸನಾತನ ಧರ್ಮ ಮನೆಮಾಡಿದೆ ಎಂಬ ಸತ್ಯ ಗೋಚರಿಸಿತು. ಸನಾತನ ಧರ್ಮವು ಈ ಮಣ್ಣಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವೇದಿಕೆಯಾಗಿದ್ದು, ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಅಗತ್ಯವಿದೆ ಎಂದು ಶ್ರೀಕೃಷ್ಣ ಗಜಾನನ ಕುಲಕರ್ಣಿ ಹೇಳಿದರು.
ಗಾಂಧೀಜಿ ತತ್ವಕ್ಕೆ ವೇದ- ಉಪನಿಷತ್ತುಗಳೇ ಅಡಿಪಾಯ:
ಗಾಂಧೀಜಿಯವರು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿರುವಂತೆ ಜಗತ್ತಿಗೆ ಯಾವುದೇ ಹೊಸ ಸಿದ್ಧಾಂತವನ್ನು ಅವರು ನೀಡಲಿಲ್ಲ. ಅವರು ಪ್ರತಿಪಾದಿಸಿದ ವಿಚಾರಗಳು ನೇರವಾಗಿ ವೇದಗಳು, ಉಪನಿಷತ್ತುಗಳು ಹಾಗೂ ಭಗವದ್ಗೀತೆಯ ತತ್ವಗಳೇ ಆಗಿದ್ದವು. ಗಾಂಧೀಜಿ ಅವರಿಗೆ ಭಗವದ್ಗೀತೆಯು ಆಧ್ಯಾತ್ಮಿಕ ತಾಯಿಯಾಗಿತ್ತು. ತಮ್ಮ ಜೀವನದ ತೀವ್ರ ಸಂಕಷ್ಟದ ಹಾಗೂ ಕಠಿಣ ಪರಿಸ್ಥಿತಿಗಳಲ್ಲಿ ಗೀತೆಯ ಬೋಧನೆಗಳೇ ಅವರಿಗೆ ದಾರಿದೀಪವಾಗಿದ್ದವು ಎಂದು ಹೇಳಿದರು.
ಪೂರ್ವಾಗ್ರಹ ರಹಿತ ಇತಿಹಾಸ ವಿಶ್ಲೇಷಣೆ ಅಗತ್ಯ:
ಮಹಾತ್ಮ ಗಾಂಧೀಜಿ ಹಾಗೂ ವಿನಾಯಕ ದಾಮೋದರ ಸಾವರ್ಕರ್ ಅವರಂತಹ ವ್ಯಕ್ತಿತ್ವಗಳನ್ನು ವಿಶ್ಲೇಷಿಸುವಾಗ ರಾಜಕೀಯ ಅಥವಾ ವ್ಯಕ್ತಿಗತ ಪೂರ್ವಾಗ್ರಹಗಳನ್ನು ಬದಿಗಿಡಬೇಕು. ಅವರನ್ನು ಕೇವಲ ‘ಸತ್ಯ’ದ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಮೌಲ್ಯಮಾಪನ ಮಾಡಬೇಕಾಗಿದೆ. ಪ್ರಸ್ತುತ ಜಾಗತಿಕ ಅಸ್ಥಿರತೆಯ ವಾತಾವರಣದಲ್ಲಿ ಶಾಂತಿ ನೆಲೆಸಬೇಕಾದರೆ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮಾರ್ಗವೊಂದೇ ಶಾಶ್ವತ ಪರಿಹಾರ ಎಂದು ಕುಲಕರ್ಣಿ ಪ್ರತಿಪಾದಿಸಿದರು.
ವಿಶ್ವ ನಾಯಕರ ಸ್ವಾರ್ಥದಿಂದ ಸಂಕಷ್ಟ:
ಇಂದಿನ ಜಾಗತಿಕ ಯುದ್ಧ ಪರಿಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ರಷ್ಯಾ- ಉಕ್ರೇನ್ ಹಾಗೂ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ವಿಶ್ವ ನಾಯಕರ ಸ್ವಾರ್ಥ ಮತ್ತು ಭೀತಿಯೇ ಮುಖ್ಯ ಕಾರಣ. ಅಧಿಕಾರ ಅಥವಾ ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಿಂದಾಗಿ ನಾಯಕರು ಮಾನವಕುಲಕ್ಕೆ ಕಂಟಕವಾಗುವಂತಹ ವಿನಾಶಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾಗರ ಕುಂಬ್ರ ಜತ್ತಪ್ಪ ರೈ ಅವರ ಪುತ್ರ ಹಾಗೂ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಸ್ಥಾಪಕ ಕೆ. ಪ್ರಮೋದ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ತಂದೆಯವರ ಸ್ಮರಣಾರ್ಥ ಗಾಂಧೀಜಿಯವರ ಚಿಂತನೆಗಳನ್ನು ಪಸರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ತಿಳಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ದಿಕ್ಸೂಚಿ ಭಾಷಣ ಮಾಡಿದರು. ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಅವರು ‘ಗಾಂಧಿ ಪಜ್ಜೆದ ಸಾದಿ ಪತ್ತೊಂದು’ ತುಳು ಭಾಷಾಂತರ ಪುಸ್ತಕ ಲೋಕಾರ್ಪಣೆ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದ್ದರು. ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಲ್.ಸಿ. ಮಲ್ಲಯ್ಯ, ಐಜಿಪಿ ಆರ್. ಚೇತನ್, ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲ ಪ್ರೊ.ಜಯವಂತ್ ನಾಯಕ್ ಮತ್ತಿತರರು ಇದ್ದರು.








