


ಮಂಗಳೂರು: ರಾಜ್ಯ ಸರ್ಕಾರವು ಹವಾಮಾನ ಆಧರಿತ ಬೆಳೆ ವಿಮೆಯ ನಿಯಮಾವಳಿಗಳನ್ನು (ಟರ್ಮ್ ಶೀಟ್) ವಿಮಾ ಕಂಪೆನಿಗಳಿಗೆ ಅನುಕೂಲವಾಗುವಂತೆ ಬದಲಾಯಿಸಿದೆ. ಈ ಮೂಲಕ ಪ್ರತಿ ಜಿಲ್ಲೆಯಿಂದ ಸಚಿವರು ಹಾಗೂ ಸರ್ಕಾರ ತಲಾ ₹ 50 ಕೋಟಿಗೂ ಅಧಿಕ ಕಿಕ್‌ಬ್ಯಾಕ್ ಪಡೆದಿದ್ದು, ರಾಜ್ಯಾದ್ಯಂತ ₹ 1,500 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆಸಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಗಂಭೀರ ಆರೋಪ ಮಾಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಹಾಗೂ ಇತರ ಬೆಳೆಗಾರರಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ಪಾವತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಪುರಭವನದ ಮಿನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಅವರು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ನಾಯಕರ ವಿರುದ್ಧ ನೇರ ಆರೋಪ ಮಾಡಿದರು.


ಬೆಳೆ ವಿಮೆ ಕಂಪೆನಿಗಳೊಂದಿಗೆ ರಾಜ್ಯ ಸರ್ಕಾರ ಶಾಮೀಲಾಗಿ ಜಿಲ್ಲೆಯ ರೈತರ ವಿಮಾ ಹಣಕ್ಕೇ ಕನ್ನ ಹಾಕಿರುವುದು ಅಕ್ಷಮ್ಯ. ರಾಜ್ಯಾದ್ಯಂತ ₹ 1,500 ಕೋಟಿಗೂ ಅಧಿಕ ಬೃಹತ್ ಭ್ರಷ್ಟಾಚಾರ ಈ ಸರ್ಕಾರದಿಂದ ನಡೆದಿದೆ ಎಂದರು.


ಯಾರ ಜೇಬಿಗೆ ಎಷ್ಟು ಹಣ ಹೋಗಿದೆ?:
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ₹ 32,000 ಕೋಟಿ ಹೂಡಿಕೆ ಮಾಡುತ್ತೇವೆ ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃಷಿಕರ ಬೆವರಿನ ಹಣವನ್ನು ದೋಚಿ ಹೂಡಿಕೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಹರೀಶ್ ಪೂಂಜ, ಪ್ರತಿಯೊಂದಕ್ಕೂ ಮೈಕ್ ಹಿಡಿದು ಮಾತನಾಡುವ ಕಾಂಗ್ರೆಸ್ ನಾಯಕರಾದ ಯು.ಟಿ. ಖಾದರ್, ಅಶೋಕ್ ಕುಮಾರ್ ರೈ, ರಮಾನಾಥ್ ರೈ, ರಕ್ಷಿತ್ ಶಿವರಾಂ, ಮಿಥುನ್ ರೈ ಹಾಗೂ ಪದ್ಮರಾಜ್ ಅವರಿಗೆ ತಾಕತ್ತಿದ್ದರೆ ಬೆಳೆ ವಿಮೆಯ ಟರ್ಮ್ ಶೀಟ್ ಬದಲಾಯಿಸಿದ್ದೇಕೆ ಮತ್ತು ಯಾರ ಜೇಬಿಗೆ ಎಷ್ಟು ಹಣ ಹೋಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಶಾಲಾ ಮಕ್ಕಳ ಶೂ- ಚಪ್ಪಲಿಯಿಂದ ಹಿಡಿದು ವೃದ್ಧಾಪ್ಯ ವೇತನದವರೆಗೆ ಭ್ರಷ್ಟಾಚಾರ ಎಸಗಿರುವ ರಾಜ್ಯ ಸರ್ಕಾರ, ಕರಾವಳಿ ರೈತರ ಪಾಲಿಗೆ ಭಸ್ಮಾಸುರನಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ವಿಮೆ ಪರಿಹಾರ ಕಡಿತಗೊಂಡಾಗ ಪಂಚಾಯ್ತಿಗಳ ದೋಷಪೂರಿತ ಮಳೆಮಾಪನಗಳ ನೆಪ ಹೇಳಿ ರೈತರ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದರು. ಆದರೆ ಈಗ ಸರ್ಕಾರವೇ ಶಾಮೀಲಾಗಿ ನಿಯಮಗಳನ್ನು ಬದಲಿಸಿ ರೈತರಿಗೆ ಮೋಸ ಮಾಡಿರುವುದು ಗೊತ್ತಾಗಿದೆ. ಮುಂಬರುವ ಚುನಾವಣೆಗಳಲ್ಲಿ ಈ ಸರ್ಕಾರವನ್ನು ಕಿತ್ತೆಸೆದು ಅರಬ್ಬೀ ಸಮುದ್ರಕ್ಕೆ ಎಸೆಯುವ ಕೆಲಸವನ್ನು ಜನರು ಮಾಡಲಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ದಕ್ಷಿಣ ಕನ್ನಡ ಸಹಕಾರಿ ಭಾರತಿ ಅಧ್ಯಕ್ಷರು ಹಾಗೂ ಕೆ.ಎಂ.ಎಫ್. ನಿರ್ದೇಶಕ ಸುಧಾಕರ್ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಲಪ್ಪ ಗೌಡ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು ಮತ್ತಿತರರು ವೇದಿಕೆಯಲ್ಲಿದ್ದರು.
ಹಕ್ಕೊತ್ತಾಯ ಸಭೆಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಿಜೆಪಿ ಕಾರ್ಯಕರ್ತರು, ರೈತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಭೆಯ ಬಳಿಕ ಬಿಜೆಪಿಯ ಎಲ್ಲ ಜನಪ್ರತಿನಿಧಿಗಳು ಹಾಗೂ ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ರೈತರ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ
ರೈತರ ಹಣ ಯಾರ ಜೇಬು ಸೇರಿದೆ?: ಸಂಸದ ಕ್ಯಾ.ಚೌಟ
ಜಿಲ್ಲೆಯ ರೈತರಿಗೆ ಬೆಳೆ ವಿಮಾ ಪರಿಹಾರದಲ್ಲಿ ಆಗಿರುವ ಅನ್ಯಾಯದ ಕುರಿತು ಬಿಜೆಪಿ ಎತ್ತಿರುವ ಪ್ರಶ್ನೆಗಳಿಗೆ ರಾಜ್ಯದ ಯಾವೊಬ್ಬ ಸಚಿವ ಅಥವಾ ಕಾಂಗ್ರೆಸ್ ನಾಯಕನ ಬಳಿ ಉತ್ತರವಿಲ್ಲ. ಹತ್ತಕ್ಕೆ ಹತ್ತೂ ಸುಳ್ಳು ಹೇಳುವ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಬೆಳೆ ವಿಮೆಯಲ್ಲಿ ಕೋಟ್ಯಂತರ ರುಪಾಯಿ ಯಾರ ಜೇಬಿಗೆ ಹೋಗಿದೆ ಎಂದು ಸ್ಪಷ್ಟಪಡಿಸಬೇಕು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹಿಸಿದರು.
ಬಸವರಾಜ ಬೊಮ್ಮಾಯಿ ಸರ್ಕಾರ ತಂದಿದ್ದ ‘ರೈತ ವಿದ್ಯಾನಿಧಿ’ಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಹೈನುಗಾರರಿಗೆ ನೀಡಬೇಕಾದ ಲೀ.ಗೆ ₹ 5 ಪ್ರೋತ್ಸಾಹಧನ ಕಳೆದ 6-8 ತಿಂಗಳಿಂದ ಬಾಕಿ ಉಳಿದಿದೆ. ಸಂಪೂರ್ಣ ದಿವಳಿಯಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ದಿವಾಳಿತನ ಮುಚ್ಚಿಕೊಳ್ಳಲು ರೈತರ ಬೆಳೆ ವಿಮೆ ಯೋಜನೆಗೆ ಕನ್ನ ಹಾಕಿ ಹಣ ದೋಚುತ್ತಿದೆ ಎಂದು ಕ್ಯಾ. ಚೌಟ ಆರೋಪಿಸಿದರು.
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತಿದ್ದ ₹ 6,000 ಜತೆಗೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ₹ 4,000 ಸೇರಿಸಿ ₹ 10,000 ನೀಡಲಾಗುತ್ತಿತ್ತು. ಆದರೆ 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ತಕ್ಷಣ ಆ ಹಣವನ್ನೂ ವಾಪಸ್ ತೆಗೆದುಕೊಂಡು ರೈತ ವಿರೋಧಿ ನೀತಿ ತಳೆದಿದೆ. ರೈತರ ಈ ಆಕ್ರೋಶದ ಜ್ವಾಲೆ ಕಾಂಗ್ರೆಸ್ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ಕಿಡಿಕಾರಿದರು.
₹ 294 ಕೋಟಿ ವಿಮಾ ಪ್ರೀಮಿಯಂ ಗೋಲ್‌ಮಾಲ್: ಸಂಜೀವ ಮಠಂದೂರು
ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಬೆಳೆಗಾರರಿಂದ ₹ 42.03 ಕೋಟಿ (ಶೇ.5), ಕೇಂದ್ರದಿಂದ ₹ 84.07 ಕೋಟಿ (ಶೇ.10) ಹಾಗೂ ರಾಜ್ಯ ಸರ್ಕಾರದ ಪಾಲು ಸೇರಿ ಒಟ್ಟು ₹ 294 ಕೋಟಿ ಪ್ರೀಮಿಯಂ ಹಣವನ್ನು ವಿಮಾ ಕಂಪೆನಿಗೆ ನೀಡಲಾಗಿದೆ. ಕಾಳುಮೆಣಸಿನ ವಿಮಾ ಪ್ರೀಮಿಯಂ ₹ 46.11 ಕೋಟಿ ಸಂಗ್ರಹವಾಗಿದೆ. ವಿಮಾ ಕಂಪೆನಿಗಳಲ್ಲಿ ಇಡಲಾಗುವ ಈ ₹ 294 ಕೋಟಿ ಹಣಕ್ಕೆ ಬರುವ ಸುಮಾರು ₹ 29 ಕೋಟಿ ಬಡ್ಡಿ ಹಣ ಯಾರ ಕಿಸೆಗೆ ಹೋಗುತ್ತಿದೆ ಎಂದು ಪುತ್ತೂರಿನ ಮಾಜಿ ಶಾಸಕ ಹಾಗೂ ಬಿಜೆಪಿ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಪ್ರಶ್ನಿಸಿದರು.
ಸತ್ಯಶೋಧನಾ ಸಮಿತಿ ಜಿಲ್ಲೆಯ 270ಕ್ಕೂ ಹೆಚ್ಚು ಪಂಚಾಯ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, 271 ಮಳೆಮಾಪಕಗಳಲ್ಲಿ 234 ಯಂತ್ರಗಳು ಹಾಗೂ 20 ಹೋಬಳಿಗಳ ಹವಾಮಾನ ಮಾಪಕಗಳು ಸಂಪೂರ್ಣ ಸರಿಯಾಗಿವೆ ಎಂಬ ಸತ್ಯ ಬಯಲಾಗಿದೆ. ಹೀಗಿದ್ದರೂ ರೈತರಿಗೆ ಬೆಳೆ ವಿಮಾ ಪರಿಹಾರದಲ್ಲಿ ಭಾರೀ ಕಡಿತ ಉಂಟಾಗಿರುವುದು ಸರ್ಕಾರದ ಸಂಚಿನಿಂದಲೇ ಹೊರತು ಬೇರೆ ಯಾವುದರಿಂದಲ್ಲ ಎಂದು ಆರೋಪಿಸಿದರು.
ಬರ ಘೋಷಣೆಯಲ್ಲೂ ರಾಜಕೀಯ:
ಉಳ್ಳಾಲ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ರಾಜ್ಯ ಸರ್ಕಾರ, ಸುಳ್ಯ, ಪುತ್ತೂರು, ಮೂಡುಬಿದಿರೆ ಹಾಗೂ ಮುಲ್ಕಿಯನ್ನು ಕೈಬಿಟ್ಟು ರೈತರಿಗೆ ದ್ರೋಹ ಎಸಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಮಾತ್ರ ಬರ ಬರುವುದು ಹೇಗೆ? ಜಿಲ್ಲೆಯ ಭೌಗೋಳಿಕ ವ್ಯವಸ್ಥೆಯ ಅರಿವಿಲ್ಲವೇ? ಎಲ್ಲ ತಾಲೂಕುಗಳ ಕೃಷಿಕರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಲಿ ಎಂದು ಮಠಂದೂರು ಆಗ್ರಹಿಸಿದರು.
ಭಾವನೆಯೂ ಇಲ್ಲ, ಬದುಕೂ ನೀಡದ ಡೋಂಗಿ ಸರ್ಕಾರ: ಸತೀಶ್ ಕುಂಪಲ
ಮಂಗಳೂರಿನಲ್ಲಿ ಕ್ಯಾಬಿನೆಟ್ ನಡೆಸಿ ₹ 32,000 ಕೋಟಿ ಹೂಡಿಕೆಯ ಮಾತಾಡುವ ಮುಖ್ಯಮಂತ್ರಿ ಹಾಗೂ ಸಚಿವರಿಗೆ, ಕಳೆದ 3-4 ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ₹ 2,000 ಹಣ ನೀಡಲು ಸಾಧ್ಯವಾಗಿಲ್ಲ. ಕ್ಯಾಬಿನೆಟ್ ಗಾಗಿ ಮಂಗಳೂರಿನ ಹೈಟೆಕ್ ರಸ್ತೆಗಳಲ್ಲಿ ಮೆರವಣಿಗೆ ಮಾಡುವುದಲ್ಲ, ಚಾರ್ಮಾಡಿ ಘಾಟ್ ಅಥವಾ ಕಾಡಂಚಿನ ಗ್ರಾಮಗಳಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ರೈತರ ನರಕ ಯಾತನೆಯನ್ನು ಕಣ್ಣಾರೆ ನೋಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು.
ಹಕ್ಕೊತ್ತಾಯ ಸಭೆಯ ಪ್ರಮುಖ ಬೇಡಿಕೆಗಳು
– 2023ರಲ್ಲಿ ತಿದ್ದುಪಡಿ ಮಾಡಿದ ಬೆಳೆ ವಿಮೆಯ ಟರ್ಮ್ ಶೀಟ್ ರದ್ದುಗೊಳಿಸಿ, 2018– 2023ರ ಬಿಜೆಪಿ ಸರ್ಕಾರದ ರೈತಸ್ನೇಹಿ ನಿಯಮಗಳನ್ನು ಮರುಸ್ಥಾಪಿಸಬೇಕು.
– ಈ ಸಾಲಿನ ಬೆಳೆ ವಿಮೆ ಪರಿಹಾರವನ್ನು ಮರುಪರಿಶೀಲಿಸಿ ಹೆಕ್ಟೇರ್‌ಗೆ ₹ 90,000ದಿಂದ ₹ 1,20,000ವರೆಗಿನ ಬಾಕಿ ಪರಿಹಾರ ಬಿಡುಗಡೆ ಮಾಡಬೇಕು.
– ದೋಷಪೂರಿತ ಪಂಚಾಯ್ತಿ ವ್ಯವಸ್ಥೆ ಬದಲಿಗೆ ಹೋಬಳಿ ಮಟ್ಟದ ಪಾರದರ್ಶಕ ಹವಾಮಾನ ದತ್ತಾಂಶವನ್ನು ಇದಕ್ಕೆ ಅನ್ವಯಿಸಬೇಕು.
– ಶೂನ್ಯ ಅಥವಾ ಬಡ್ಡಿರಹಿತ ₹ 5 ಲಕ್ಷ ಸಾಲ ಸೌಲಭ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಕ್ಷಣ ಅನುಷ್ಠಾನಗೊಳಿಸಬೇಕು.
– ಕಾಡುಪ್ರಾಣಿಗಳ ಹಾವಳಿ ತಡೆದು, ರೈತರ ಬಂದೂಕು ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.
ಅ.15ರಿಂದ ಪ್ರತಿ ಗ್ರಾ.ಪಂನಲ್ಲೂ ಪಾದಯಾತ್ರೆ, ಪ್ರತಿಭಟನೆ
ರಾಜ್ಯ ಸರ್ಕಾರದ ಭ್ರಷ್ಟಾಚಾರ, ರೈತ ವಿರೋಧಿ ಧೋರಣೆ ಹಾಗೂ ಬೆಳೆ ವಿಮೆ ಹಗರಣವನ್ನು ಖಂಡಿಸಿ ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ, ಪುರಸಭೆ ಹಾಗೂ ನಗರಸಭೆಗಳ ಎದುರು ಬಿಜೆಪಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಹಕ್ಕೊತ್ತಾಯ ಸಭೆಯಲ್ಲಿ ಪ್ರಕಟಿಸಿದರು.
ಬೆಳೆವಿಮೆ ಪರಿಹಾರದಲ್ಲಿ ಕಡಿತ: ಬಿಜೆಪಿ ಆರೋಪಗಳೇನು?
ರೈತರ ಬೆಳೆವಿಮೆ ಪರಿಹಾರದಲ್ಲಿ ಅನ್ಯಾಯ ಹೇಗೆ ನಡೆದಿದೆ ಎಂಬುದರ ಕುರಿತು ಶಾಸಕ ಹರೀಶ್ ಪೂಂಜಾ ಅವರು ಹಕ್ಕೊತ್ತಾಯ ಸಭೆಯಲ್ಲಿ ವಿಸ್ತೃತ ಮಾಹಿತಿ ನೀಡಿದರು.
ಪ್ರೀಮಿಯಂ ಪಾಲು ಏರಿಕೆ:
ಬಿಜೆಪಿ ಸರ್ಕಾರದ ಅವಧಿಯಲ್ಲಿ (2018–2023) ಒಟ್ಟು ಶೇ.25 ಪ್ರೀಮಿಯಂ ಇತ್ತು. ಇದರಲ್ಲಿ ರೈತರ ಪಾಲು ಶೇ.5, ಕೇಂದ್ರ ಸರ್ಕಾರ ಶೇ.10, ರಾಜ್ಯ ಸರ್ಕಾರ ಶೇ. 10 ಪಾಲು ನೀಡಬೇಕಿತ್ತು. ಆಗ ರೈತರಿಗೆ ಹೆಕ್ಟೇರ್‌ಗೆ ₹ 80,000 ದಿಂದ ₹ 1,20,000ವರೆಗೆ ಪರಿಹಾರ ಸಿಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಪಾಲನ್ನು ಶೇ.20ಕ್ಕೆ ಏರಿಸಿ ಒಟ್ಟು ಪ್ರೀಮಿಯಂನ್ನು ಶೇ.35ಕ್ಕೆ ಹೆಚ್ಚಿಸಿ ವಿಮಾ ಕಂಪೆನಿಗೆ ಲಾಭ ಮಾಡಿಕೊಟ್ಟು, ಬೆಳೆಗಾರರಿಗೆ ಕೇವಲ ₹ 20,000ದಿಂದ ₹ 25,000 ದೊರೆಯುವಂತೆ ಮಾಡಿದೆ.
ಟರ್ಮ್ ಶೀಟ್ ನಿಯಮಾವಳಿ ಬದಲಾವಣೆ:
ಬೆಳೆ ವಿಮೆಯ ಕನಿಷ್ಠ ಮಳೆ ಮಿತಿಯನ್ನು (ಟ್ರಿಗರ್) ಬಿಜೆಪಿ ಸರ್ಕಾರವಿದ್ದಾಗ 125 ಮಿ.ಮೀ. ಇದ್ದುದನ್ನು ಕಾಂಗ್ರೆಸ್ ಸರ್ಕಾರ 250 ಮಿ.ಮೀ.ಗೆ ಹೆಚ್ಚಿಸಿದೆ. ‘ನಿರಂತರ ಮಳೆ’ ನಿಯಮ ರದ್ದುಗೊಳಿಸಿ, ಅತಿಯಾದ ಮಳೆಗೆ ನೀಡುತ್ತಿದ್ದ ಗರಿಷ್ಠ ಪರಿಹಾರವನ್ನು ₹ 1,28,000ದಿಂದ ₹ 75,000ಕ್ಕೆ ಇಳಿಸಲಾಗಿದೆ. 3 ವರ್ಷಗಳ ಟೆಂಡರ್ ಅವಧಿ ಮುಗಿದಿದ್ದರೂ ಹೊಸ ಟೆಂಡರ್ ಕರೆಯದೆ ‘ಟಾಟಾ ಎಐಜಿ’ ಕಂಪೆನಿಗೆ ಅನಧಿಕೃತವಾಗಿ ಅವಧಿ ವಿಸ್ತರಿಸಿ ಕೊಡಲಾಗಿದೆ ಎಂದು ಹರೀಶ್ ಪೂಂಜ ಆರೋಪಿಸಿದರು.








