ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ಮಂಗಳೂರಲ್ಲಿ ಮಹತ್ವದ ಸಭೆ – ಉಚ್ಚ ನ್ಯಾಯಾಲಯದ ಸಮಿತಿಗೆ ಅಗತ್ಯ ಚೆಕ್ ಲಿಸ್ಟ್ ಸಿದ್ಧಪಡಿಸಲು ಡಿಸಿ ನೇತೃತ್ವದಲ್ಲಿ ಸಮಿತಿ: ಸಚಿವ ಯು.ಟಿ. ಖಾದರ್ – ಪೀಠ ಸ್ಥಾಪನೆಗೆ ಎಲ್ಲರ ಸಹಕಾರ ಅಗತ್ಯ: ಹೋರಾಟ ಸಮಿತಿ ಸಂಚಾಲಕ ಐವನ್ ಡಿಸೋಜ

ಮಂಗಳೂರು: ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬುದು ಕೇವಲ ವಕೀಲರ ಅಥವಾ ಕಕ್ಷಿದಾರರ ಬೇಡಿಕೆಯಲ್ಲ, ಬದಲಿಗೆ ಇದು ಇಡೀ ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಐತಿಹಾಸಿಕ ಹೆಜ್ಜೆಯಾಗಿದೆ. ಪೀಠ ಸ್ಥಾಪಿಸುವ ಸಾಧ್ಯತೆ ಪರಿಶೀಲಿಸಲು ಆಗಮಿಸಲಿರುವ ಮೂವರು ನ್ಯಾಯಾಧೀಶರ ಸಮಿತಿಯ ಮೌಲ್ಯಮಾಪನಕ್ಕೆ ಅಗತ್ಯವಿರುವ ಮೂಲಸೌಕರ್ಯಗಳು ಮತ್ತು ಇತರ ಸೌಲಭ್ಯಗಳ ಪರಿಶೀಲನಾ ಪಟ್ಟಿಯನ್ನು (ಚೆಕ್‌ಲಿಸ್ಟ್) ಸಿದ್ಧಪಡಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಭಾನುವಾರ ಮಂಗಳೂರಿನಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.

ದಸರಾ ಹಬ್ಬದ ನಂತರ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಮತ್ತು ಶಿವಮೊಗ್ಗದಂತಹ ಪಕ್ಕದ ಜಿಲ್ಲೆಗಳ ನಡುವೆ ಒಮ್ಮತ ಮೂಡಿಸಲು ಪ್ರಯತ್ನಿಸಲಾಗುವುದು. ಈ ಪ್ರಸ್ತಾವನೆಯ ಕುರಿತು ಚರ್ಚಿಸಲು ಮತ್ತು ಅವರ ಬೆಂಬಲ ಪಡೆಯಲು ಆಯಾ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ಕರೆಯಲಾಗುವುದು ಎಂದರು.

ಹೈಕೋರ್ಟ್ ಪೀಠದ ಸ್ಥಾಪನೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದು ಖಾದರ್ ಹೇಳಿದರು.

ಸಮಸ್ಯೆಗಳ ಅಫಿದವಿತ್ ನೊಂದಿಗೆ ಮನವಿ:

ಬೆಂಗಳೂರಿನ ಹೈಕೋರ್ಟ್‌ನಲ್ಲಿ ಪ್ರಕರಣಗಳು ಬಾಕಿ ಉಳಿದಿರುವ ಕಾರಣದಿಂದಾಗಿ ದಾವೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸುವ ಅಫಿಡವಿಟ್ ನೊಂದಿಗೆ ಸಮಿತಿಗೆ ಮನವಿ ಸಲ್ಲಿಸುವಂತೆ ಹಿರಿಯ ವಕೀಲ ಎಂ.ಪಿ. ನೊರೋನ್ಹಾ ಸಲಹೆ ನೀಡಿದರು. ಬೆಂಗಳೂರಿಗೆ ಪ್ರಯಾಣಿಸುವಾಗ ಎದುರಾಗುವ ಸಮಸ್ಯೆಗಳು ಮತ್ತು ಅದಕ್ಕೆ ತಗಲುವ ವೆಚ್ಚಗಳ ಬಗ್ಗೆ ವಾಸ್ತವಿಕ ಅಂಕಿ- ಅಂಶಗಳೊಂದಿಗೆ ಮನವಿಯಲ್ಲಿ ದಾಖಲಿಸಬೇಕು ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠವೊಂದಿದ್ದರೆ, ಒಬ್ಬ ನ್ಯಾಯಾಧೀಶರು ವರ್ಷಕ್ಕೆ 1,200ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ. ಧಾರವಾಡ ಮತ್ತು ಕಲಬುರಗಿಯಲ್ಲಿ ಹೈಕೋರ್ಟ್ ಪೀಠಗಳಿರುವಾಗ, ಕರಾವಳಿ ಪ್ರದೇಶದಲ್ಲಿ ಕೂಡ ಸ್ಥಾಪನೆ ಆಗಲೇಬೇಕಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ಹೈಕೋರ್ಟ್ ಪೀಠದ ಬೇಡಿಕೆಯ ಕುರಿತು ಗಮನ ಸೆಳೆಯಲು ‘ಪೋಸ್ಟ್‌ಕಾರ್ಡ್ ಅಭಿಯಾನ’ ನಡೆಸುವಂತೆ ಸಲಹೆ ನೀಡಿದರು.

ಒಗ್ಗಟ್ಟಿನ ಪ್ರಯತ್ನ ಅಗತ್ಯ- ಶಾಸಕರು:

ಈ ಬೇಡಿಕೆಯು ಕೇವಲ ವಕೀಲರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಈ ಪ್ರದೇಶದ ನಾಗರಿಕರಿಗೂ ಸಂಬಂಧಿಸಿದೆ ಎಂದು ಶಾಸಕರಾದ ರಾಜೇಶ್ ನಾಯ್ಕ್ ಮತ್ತು ವೇದವ್ಯಾಸ ಕಾಮತ್ ಹೇಳಿದರು. ಮೂರು ಸದಸ್ಯರ ಸಮಿತಿಯು ಅನುಕೂಲಕರ ವರದಿ ಸಲ್ಲಿಸುವಂತೆ ನೋಡಿಕೊಳ್ಳಲು ಸಂಬಂಧಪಟ್ಟವರು ಒಗ್ಗೂಡಿ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಐವನ್ ಡಿಸೋಜ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ.ಅರುಣ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.

———-

ಬಾಕ್ಸ್

ಎಲ್ಲರನ್ನು ಒಗ್ಗೂಡಿಸಿ ಪೀಠ ಸ್ಥಾಪನೆಯ ಕನಸು ನನಸು: ಐವನ್ ಡಿಸೋಜ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಲೇಬೇಕು ಎಂಬ ಬೇಡಿಕೆ ಇಟ್ಟುಕೊಂಡು ದಶಕದಿಂದ ಹೋರಾಟ ಆರಂಭವಾಗಿದೆ. ಕಳೆದ 3-4 ವರ್ಷಗಳಿಂದ ಹೋರಾಟಕ್ಕೆ ಇನ್ನಷ್ಟು ವೇಗ ಸಿಕ್ಕಿದ್ದು, ಹಲವು ರೀತಿಯ ಹೋರಾಟ ನಡೆಸಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮುತುವರ್ಜಿ ವಹಿಸಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಇದರಿಂದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಇದೀಗ ಹೈಕೋರ್ಟ್ ಸಮಿತಿ ನೇಮಕ ಮಾಡುವ ಮೂಲಕ ಮಹತ್ವದ ಕಾಲಘಟ್ಟಕ್ಕೆ ಈ ವಿಷಯ ತಲುಪಿದೆ. ಎಲ್ಲರನ್ನು ಒಟ್ಟು ಸೇರಿಸಿ ಪೀಠ ಸ್ಥಾಪನೆಯ ಕೆಲಸ ಆಗಬೇಕಿದೆ. ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಪೂರಕವಾಗಿ ಸ್ಪಂದಿಸಿದ್ದು, ಶೀಘ್ರ ಈ ಕನಸು ನನಸಾಗಲಿದೆ ಎಂದು ಎಂಎಲ್ಸಿ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕ ಐವನ್ ಡಿಸೋಜ ಹೇಳಿದರು.

LEAVE A REPLY

Please enter your comment!
Please enter your name here