ಬೆಳೆ ವಿಮೆ ಟರ್ಮ್ ಶೀಟ್ ಬದಲಿಸಿಲ್ಲ, ಬಿಜೆಪಿಯಿಂದ ಆಧಾರರಹಿತ ಸುಳ್ಳು ಆರೋಪ: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ರಾಜ್ಯ ಸರ್ಕಾರವು ಬೆಳೆ ವಿಮೆಯ ಟರ್ಮ್ ಶೀಟ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಿಜೆಪಿ ನಾಯಕರು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ವಿಮೆ ವಿಚಾರದಲ್ಲಿ ಬಿಜೆಪಿ ಶಾಸಕರು ಮತ್ತು ಮುಖಂಡರು ಸಮರ್ಪಕ ಜ್ಞಾನವಿಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿಯನ್ನು ಹಬ್ಬಿಸಿ ರಾಜಕೀಯವಾಗಿ ಆರೋಪ ಮಾಡುತ್ತಿದ್ದಾರೆ. ​ಪ್ರಧಾನಮಂತ್ರಿ ಫಸಲ್ ಬಿಮಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ವಿಮಾ ಕಂಪೆನಿಗಳು ಕೇಂದ್ರದ ಅಧೀನಕ್ಕೆ ಬರುತ್ತವೆ. ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ವಿಮಾ ಕಂಪೆನಿಯ (ಟಾಟಾ ಎಐಜಿ) ನಿಯಮಾವಳಿಗಳ ಪ್ರಕಾರ ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಮಳೆ ಹೆಚ್ಚಳವಾದರೆ ವಿಮೆ ಸಿಗುವ ಮಾನದಂಡಗಳು ಮೊದಲೇ ವಿಮಾ ಪಾಲಿಸಿಯಲ್ಲಿ ನಿಗದಿಯಾಗಿರುತ್ತವೆ. ಇದರಲ್ಲಿ ರಾಜ್ಯ ಸರ್ಕಾರ ಯಾವುದೇ ಹೊಸ ಬದಲಾವಣೆ ಮಾಡಿಲ್ಲ. ಕಳೆದ ಸಾಲಿನಲ್ಲಿ ನಿರೀಕ್ಷಿತ ಮಳೆ ದಾಖಲಾಗದ ಕಾರಣ ಕಡಿಮೆ ವಿಮಾ ಪರಿಹಾರ ಮೊತ್ತ ಪಾವತಿಯಾಗಿರುವ ಸಾಧ್ಯತೆಯಿದೆ. ಅಡಕೆ ಹಾಗೂ ಕಾಳುಮೆಣಸು ಬೆಳೆಗಳಲ್ಲಿ ರೋಗಬಾಧೆ, ಕೊಳೆರೋಗ ಅಥವಾ ಇತ್ಯಾದಿ ಕಾರಣಗಳಿಂದ ನಷ್ಟವಾಗಿದ್ದರೂ, ಅದು ವಿಮಾ ಯೋಜನೆಯಡಿ ಒಳಗೊಂಡಿರುವ ಹವಾಮಾನ ಸೂಚ್ಯಂಕಗಳೊಂದಿಗೆ ಹೊಂದಿಕೆಯಾಗದಿದ್ದರೆ ಸೂಕ್ತ ಪರಿಹಾರ ಸಿಗದೆ ಇರಬಹುದು ಎಂದು ಪದ್ಮರಾಜ್ ಪೂಜಾರಿ ತಿಳಿಸಿದರು.

ದಾಖಲೆ ಸಹಿತ ಮಾತನಾಡಲಿ:

​ಕನಿಷ್ಠ ಪರಿಜ್ಞಾನವಿಲ್ಲದೆ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿ ನಾಯಕರು ಸರ್ಕಾರದ ಯೋಜನೆಗಳು ಮತ್ತು ವಿಮಾ ನಿಯಮಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪೂರಕ ದಾಖಲೆ ಇಟ್ಟುಕೊಂಡು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರವು ಸದಾ ಕಾಲ ರೈತರ ಪರವಾಗಿ ಕಾಳಜಿ ವಹಿಸುತ್ತಿದೆ ಹಾಗೂ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

​ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ. ಸುಧೀರ್, ನೀರಜ್ ಪಾಲ್, ಉಪಾಧ್ಯಕ್ಷ ಶುಭೋದಯ ಆಳ್ವ, ಮಂಗಳೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಪ್ರದೇಶ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಸರಿತಾ ಪೂಜಾರಿ, ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಸಬಿತಾ ಮಿಸ್ಕಿತ್, ಯೋಗೀಶ್ ರಾವ್, ಮತ್ತಿತರ ಪ್ರಮುಖರು ಇದ್ದರು.

LEAVE A REPLY

Please enter your comment!
Please enter your name here